ADVERTISEMENT

ವಿಚಾರಣೆಗೆ ವರ್ಷದ ಗಡುವು

ಶಾಸಕರು, ಸಂಸದರ ವಿರುದ್ಧ ಕ್ರಿಮಿನಲ್‌ ಪ್ರಕರಣ: ‘ಸುಪ್ರೀಂ’ ತಾಕೀತು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:08 IST
Last Updated 10 ಮಾರ್ಚ್ 2014, 19:08 IST
ವಿಚಾರಣೆಗೆ ವರ್ಷದ ಗಡುವು
ವಿಚಾರಣೆಗೆ ವರ್ಷದ ಗಡುವು   

ನವದೆಹಲಿ (ಪಿಟಿಐ): ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ಇತ್ಯ­ರ್ಥ­ಗೊಳಿಸುವಂತೆ ಸುಪ್ರೀಂಕೋರ್ಟ್  ಸೋಮವಾರ ಕೆಳಹಂತದ ನ್ಯಾಯಾ­ಲಯಗಳಿಗೆ ಸೂಚಿಸಿದೆ.

ಆರೋಪಪಟ್ಟಿ ಸಲ್ಲಿಸಿದ ಒಂದು ವರ್ಷದ ಒಳಗಾಗಿ ಪ್ರಕರಣಗಳ ವಿಚಾ­ರಣೆ  ಇತ್ಯರ್ಥಗೊಳಿಸಬೇಕು. ಒಂದು ವೇಳೆ ವರ್ಷದ ಒಳಗಾಗಿ  ವಿಚಾರಣೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ವಿಳಂಬಕ್ಕೆ ಕಾರಣವಾದ ಅಂಶಗಳ ಕುರಿತು ನ್ಯಾಯಾಲಯಗಳು, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ  ವಿವರಣೆ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ವಿಚಾರಣಾ ಹಂತದ ನ್ಯಾಯಾಲಯ ನೀಡುವ ಕಾರಣಗಳು ಮನವರಿಕೆ­ಯಾದಲ್ಲಿ ಮಾತ್ರ  ಆಯಾ ರಾಜ್ಯಗಳ ಹೈಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿಗಳು  ಪ್ರಕರಣದ ವಿಚಾರಣಾ ಅವಧಿ  ವಿಸ್ತರಿಸುವ ಅಧಿಕಾರ ಹೊಂದಿ­ರುತ್ತಾರೆ ಎಂದು ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ನ್ಯಾಯಪೀಠ ಹೇಳಿದೆ.

ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ತ್ವರಿತ ಗತಿಯಲ್ಲಿ ಇತ್ಯರ್ಥಗೊಳಿಸಲು ಆಯಾ ದಿನದ ಪ್ರಕರಣಗಳನ್ನು ಅಂದೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು.

ಒಂದು ವೇಳೆ ಪ್ರಕರಣಗಳ ವಿಚಾರಣೆ­ಯನ್ನು ವರ್ಷಾನುಗಟ್ಟಲೇ ಮುಂದೂಡಿ­ದರೆ ಅಥವಾ ವಿಳಂಬ ಮಾಡಿದಲ್ಲಿ ಶಿಕ್ಷೆ ಅನುಭವಿಸಬೇಕಾದ ಕಳಂಕಿತ ಜನಪ್ರತಿ­ನಿಧಿ­ಗಳು  ಅಧಿಕಾರದ ರುಚಿ ಅನುಭವಿ­ಸುತ್ತ ಕಾಲ ತಳ್ಳುತ್ತಾರೆ  ಎಂದು ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳಂಕಿತ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಲು ವಿಚಾರಣಾ ಹಂತದ ನ್ಯಾಯಾಲಯಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸ್ವಯಂಸೇವಾ ಸಂಸ್ಥೆಯೊಂದು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ವಿಚಾರಣೆಯ ವಿಳಂಬದಿಂದಾಗಿ ಕಳಂಕಿತ ಶಾಸಕರು ಮತ್ತು ಸಂಸದರು ಶಾಸನಸಭೆಯ ಸದಸ್ಯತ್ವದ ಅಧಿಕಾರ­ವನ್ನು ದೀರ್ಘಕಾಲ ಅನುಭವಿಸು­ವಂತಾಗಿದೆ ಎಂದು ಸ್ವಯಂಸೇವಾ ಸಂಸ್ಥೆ ವಾದಿಸಿತ್ತು.

ರಾಜಕೀಯ ಅಪರಾಧೀಕರಣ: ಕಾನೂನು ಆಯೋಗ ಶಿಫಾರಸು
ನವದೆಹಲಿ (ಪಿಟಿಐ): ಕಳಂಕಿತರ ರಾಜಕೀಯ ಪ್ರವೇಶ ತಡೆಗೆ ಸಹಮತ ವ್ಯಕ್ತಪಡಿಸಿರುವ ಕಾನೂನು ಆಯೋ­ಗವು,  ನ್ಯಾಯಾಲಯ ದೋಷಾ­ರೋಪ ಪಟ್ಟಿಯಲ್ಲಿ ಹೆಸರಿಸುವ  ಅಭ್ಯರ್ಥಿ­ಗಳನ್ನು ಚುನಾವಣಾ ಸ್ಪರ್ಧೆ­ಯಿಂದ ಅನರ್ಹಗೊಳಿಸುವಂತೆ ಶಿಫಾರಸು ಮಾಡಿದೆ.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಸುಳ್ಳು ಪ್ರಮಾಣ ಪತ್ರವನ್ನು ಸಲ್ಲಿಸಿದ್ದಲ್ಲಿ ಜನಪ್ರತಿನಿಧಿ ಕಾಯ್ದೆ ಅಡಿ ಅವರಿಗೆ ಕನಿಷ್ಠ ಎರಡು ವರ್ಷಗಳ ಶಿಕ್ಷೆ ವಿಧಿಸು­ವಂತೆಯೂ ಆಯೋಗ ಸುಪ್ರೀಂ­ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ. 

ಅಭ್ಯರ್ಥಿ ಅಪರಾಧಿ ಎಂದು ತೀರ್ಮಾನವಾದ ನಂತರವಷ್ಟೇ ಚುನಾವಣೆಗೆ ಸ್ಪರ್ಧಿಸಲು ಅನರ್ಹ­ಗೊಳಿಸಿದರೆ ರಾಜಕೀಯವನ್ನು ಅಪರಾಧೀಕರಣ­ದಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ.  ಅಪರಾಧ ಸಾಬೀತು­ಪಡಿಸಲು  ವಿಳಂಬ ಮತ್ತು ಅಪರೂಪದ ಪ್ರಕರಣ­ಗಳಲ್ಲಿ ಮಾತ್ರ ಶಿಕ್ಷೆಯಾಗುತ್ತಿದೆ. ಆದ್ದರಿಂದ  ಆರೋಪ­ಪಟ್ಟಿಯಲ್ಲಿ ಹೆಸರಿಸಿದ ಅಭ್ಯರ್ಥಿಯನ್ನು ಚುನಾವಣೆ­ಯಿಂದ ಅನರ್ಹಗೊಳಿಸಬೇಕು ಎಂದು ಆಯೋಗ ಸಲಹೆ ಮಾಡಿದೆ.

ಚುನಾವಣಾ ಸುಧಾರಣಾ ಕ್ರಮಗಳ ಕುರಿತಂತೆ ಆಯೋಗ  ಮಾಡಿದ ಎರಡು ವಿಷಯಗಳು ಸೋಮ­ವಾರ ಸುಪ್ರೀಂಕೋರ್ಟ್ ಮುಂದೆ ಪರಿಶೀಲನೆಗ ಬಂದಿದ್ದವು. ಅಭ್ಯರ್ಥಿ ವಿರುದ್ಧ ಆರೋಪ ಪಟ್ಟಿ ನಿಗದಿ ಮಾಡುವ ಮುನ್ನ ವಿವಿಧ ಹಂತಗಳ ಪರಿಶೀಲನೆಗೆ ಒಳಪಡಿಸಬೇಕು ಹಾಗೂ ಕಾಯ್ದೆ ದುರುಪಯೋಗ­ವಾಗದಂತೆ ನೋಡಿಕೊಳ್ಳಬೇಕು.

ಅಪರಾಧ ಸಂಡ ಸಂಹಿತೆ ಸೆಕ್ಷನ್‌ 173 ಅಡಿ, ಅಭ್ಯರ್ಥಿಯ ವಿರುದ್ಧ ದಾಖಲಾಗುವ ದೂರು  ಆತನನ್ನು ಚುನಾ­ವಣಾ  ಸ್ಪರ್ಧೆಯಿಂದ  ಅನರ್ಹ­ಗೊಳಿಸಲು ಸಾಕಾಗದು.
ಅಭ್ಯರ್ಥಿಗಳನ್ನು ಚುನಾವಣಾ ಸ್ಪರ್ಧೆ­ಯಿಂದ ಅನರ್ಹಗೊಳಿಸಲು ಆರೋಪ­ಗಳನ್ನು ನಿಗದಿ ಮಾಡುವ ಹಂತದಲ್ಲಿ ಗಮನಿಸಬೇಕಾದ ಅಂಶಗಳ ಬಗ್ಗೆಯೂ ಆಯೋಗ ಸಲಹೆ, ಸೂಚನೆ ನೀಡಿದೆ.

ಗರಿಷ್ಠ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಶಿಕ್ಷೆಗೆ ಒಳಗಾಗು­ವಂತಹ ಅಪರಾಧ ಎಸಗಿದ ಅಭ್ಯರ್ಥಿ­ಗಳನ್ನು ಈ ವ್ಯಾಪ್ತಿಗೆ ತರುವಂತೆ ಅದು ಹೇಳಿದೆ.
ನಾಮಪತ್ರ ಪರಿಶೀಲನೆಯ ದಿನದ  ಒಂದು ವರ್ಷದ ಮೊದಲು ಅಭ್ಯ­ರ್ಥಿಯ ವಿರುದ್ಧ ಆರೋಪಪಟ್ಟಿ ನಿಗದಿ­ಯಾಗಿರಬೇಕು. ಇಲ್ಲದಿದ್ದರೆ ಅಭ್ಯರ್ಥಿ­ಯನ್ನು ಅನರ್ಹಗೊಳಿಸಲಾಗದು. ವಿಚಾರಣಾ ಹಂತದ ನ್ಯಾಯಾಲಯ­ದಿಂದ ಅಭ್ಯರ್ಥಿ ಆರೋಪ ಮುಕ್ತ­ನಾಗುವವರೆಗೂ ಅಥವಾ  ಆರು ವರ್ಷಗಳ ಕಾಲ ಈ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಹಾಲಿ  ಶಾಸಕ ಅಥವಾ ಸಂಸದರ ವಿರುದ್ಧದ ಆರೋಪಗಳ ವಿಚಾರಣೆ ತ್ವರಿತಗತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳ್ಳಬೇಕು.
  ಒಂದು ವೇಳೆ  ಒಂದು ವರ್ಷದಲ್ಲಿ ಅವರ ವಿರುದ್ಧದ ಆರೋಪಗಳ ವಿಚಾರಣೆ ಮುಕ್ತಾಯಗೊಳ್ಳದಿದ್ದರೆ ಶಾಸಕ ಅಥವಾ ಸಂಸದರಾಗಿ ಪ್ರಮಾಣ­ವಚನ ಸ್ವೀಕರಿಸಿ ಒಂದು ವರ್ಷ ಪೂರೈ­ಸಿದ ದಿನ ಅವರ ಸದಸ್ಯತ್ವ ಅನರ್ಹ­ಗೊಳಿಸಬೇಕು.   ಅವರಿಗೆ ನೀಡಲಾಗುವ ಎಲ್ಲ ಸೌಲಭ್ಯಗಳನ್ನು ಅದಕ್ಕೆ ಅನ್ವಯ­ವಾಗುವಂತೆ ಹಿಂತೆಗೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT