ADVERTISEMENT

ವಿದೇಶಗಳಲ್ಲಿರುವ ಕಪ್ಪು ಹಣ ವಾಪಾಸ್ ಸುಪ್ರೀಂಕೋರ್ಟ್‌ನಿಂದ ಸಾಧ್ಯ-ಅಡ್ವಾಣಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2011, 19:30 IST
Last Updated 16 ಜನವರಿ 2011, 19:30 IST
ವಿದೇಶಗಳಲ್ಲಿರುವ ಕಪ್ಪು ಹಣ ವಾಪಾಸ್ ಸುಪ್ರೀಂಕೋರ್ಟ್‌ನಿಂದ ಸಾಧ್ಯ-ಅಡ್ವಾಣಿ
ವಿದೇಶಗಳಲ್ಲಿರುವ ಕಪ್ಪು ಹಣ ವಾಪಾಸ್ ಸುಪ್ರೀಂಕೋರ್ಟ್‌ನಿಂದ ಸಾಧ್ಯ-ಅಡ್ವಾಣಿ   

ನವದೆಹಲಿ (ಪಿಟಿಐ): ವಿದೇಶಗಳಲ್ಲಿ ಅಡಗಿಸಿರುವ ಕಪ್ಪುಹಣವನ್ನು ದೇಶಕ್ಕೆ ಹಿಂದಕ್ಕೆ ತರಲು ಸುಪ್ರೀಂಕೋರ್ಟ್‌ನಿಂದ ಸಾಧ್ಯ ಎಂದು ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ವಿಚಾರಕ್ಕೆ ತಾರ್ಕಿಕ ಅಂತ್ಯವನ್ನು ದೇಶ ಸುಪ್ರೀಂಕೋರ್ಟ್‌ನಿಂದ ನಿರೀಕ್ಷಿಸುತ್ತಿದೆ. ವಿದೇಶಗಳಲ್ಲಿರುವ 462 ಶತಕೋಟಿ ಡಾಲರ್ ಕಪ್ಪುಹಣವನ್ನು ಮರಳಿ ತಂದರೆ ಅದರಿಂದ ದೇಶದ ಪರಿಸ್ಥಿತಿಯಲ್ಲಿ ಅದ್ಭುತವೆನಿಸುವ ಬದಲಾವಣೆ ತರಲು ಸಾಧ್ಯ. ಇದರಿಂದ ಜನತೆ ಕೋರ್ಟ್‌ಗೆ ಕೃತಜ್ಞರಾಗಿರುತ್ತಾರೆ ಎಂದು ಅವರು ಹೇಳಿದರು. ವಿದೇಶಗಳಲ್ಲಿ ಅಕ್ರಮ ಹಣ ಇರಿಸಿರುವವರ ಹೆಸರನ್ನು ಬಹಿರಂಗಪಡಿಸದಿರುವ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿರುವ ಹಿನ್ನೆಲೆಯಲ್ಲಿ ಅವರು ಭಾನುವಾರ ತಮ್ಮ ಬ್ಲಾಗ್‌ನಲ್ಲಿ ಈ ಹೇಳಿಕೆ ನೀಡಿದ್ದಾರೆ.

ಈ ಸಂಪತ್ತು ಮರಳಿ ತರುವಂತೆ ಕೋರ್ಟ್ ಸರ್ಕಾರದ ಮೇಲೆ ಒತ್ತಡ ಹೇರಿದರೆ ಕಳೆದುಹೋಗುತ್ತಿರುವ ನಂಬಿಕೆ ಪುನಃ ಸಂಪಾದಿಸಲು ಸಾಧ್ಯ ಎಂದು ಅವರು ಬ್ಲಾಗ್‌ನಲ್ಲಿ ಬರೆದಿದ್ದಾರೆ. ಕೋರ್ಟ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿರುವ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನ್ಯಾಯಾಂಗದ ಕಾರ್ಯಶೀಲತೆಯನ್ನು ಶ್ಲಾಘಿಸಿದ್ದಾರೆ. ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಧೈರ್ಯ ಪ್ರದರ್ಶಿಸಿದ ಏಕೈಕ ಸಂಸ್ಥೆ ಎಂದು ಅವರು ನ್ಯಾಯಾಂಗವನ್ನು ಪ್ರಶಂಶಿಸಿದ್ದಾರೆ.

ADVERTISEMENT

ಎಪ್ಪತ್ತರ ದಶಕದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೊಳಗಾಗಿತ್ತು. ಸಂಸತ್ತು ಜನರನ್ನು ತುಳಿದಿತ್ತು. ಆದರೆ ನ್ಯಾಯಾಂಗ ಮಾತ್ರ ತನ್ನ ಕರ್ತವ್ಯ ಪ್ರದರ್ಶಿಸಿತ್ತು ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.