ನವದೆಹಲಿ, (ಪಿಟಿಐ): ದಿನದಿಂದ ದಿನಕ್ಕೆ ನಕಲಿ ಲೈಸನ್ಸ್ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿಯ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿಮಾನ ಚಾಲನಾ ಪರವಾನಗಿ (ಕಮರ್ಷಿಯಲ್ ಪೈಲಟ್ ಲೈಸನ್ಸ್)ಗಳು ಮತ್ತು ಅವುಗಳನ್ನು ಹೊಂದಿದ ಪೈಲಟ್‌ಗಳನ್ನು ಸಮಗ್ರ ಪರಿಶೀಲನೆಗೆ ಒಳಪಡಿಸುವ ಮಹತ್ವದ ನಿರ್ಧಾರವನ್ನು ಡಿಜಿಸಿಎ ಕಚೇರಿ ತೆಗೆದುಕೊಂಡಿದೆ.
ಪೈಲಟ್‌ಗಳಿಗೆ ವಿಮಾನ ಹಾರಾಟ ತರಬೇತಿ ನೀಡುತ್ತಿರುವ ಶಾಲೆಗಳ ಬಗ್ಗೆಯೂ ತನಿಖೆ ನಡೆಸಲು ಸ್ವತಂತ್ರ ತನಿಖಾ ತಂಡ ರಚಿಸಲು ನಿರ್ಧರಿಸಲಾಗಿದ್ದು ನಕಲಿ ವಿಮಾನ ಹಾರಾಟ ಪರವಾನಗಿ ಪಡೆದವರನ್ನು ನಿರ್ದಾಕ್ಷಿಣ್ಯವಾಗಿ ಹೊರಹಾಕಲು ಡಿಜಿಸಿಎ ಸಿದ್ಧವಾಗಿದೆ.
ಈಗಾಗಲೇ ನಕಲಿ ಲೈಸನ್ಸ್ ಹೊಂದಿದ ಆರು ಪೈಲಟ್‌ಗಳು ಸಿಕ್ಕಿಬಿದ್ದಿದ್ದು ಇಂತಹ ಇನ್ನೂ ಹಲವಾರು ಪೈಲಟ್‌ಗಳು ಸೇವೆಯಲ್ಲಿರುವ ಇರುವ ಅನುಮಾನವಿದೆ. ಆ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು ಇನ್ನೂ ಆರೋಪಗಳನ್ನು ದೃಢೀಕರಿಸುವ ದಾಖಲೆಗಳು ತನಿಖಾ ತಂಡಕ್ಕೆ ಲಭ್ಯವಾಗಿಲ್ಲ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ. ಭರತ್ ಭೂಷಣ್ ಅವರು ತಿಳಿಸಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಸ್ಪೈಸ್ ಜೆಟ್‌ನ ತಲಾ ಇಬ್ಬರು ಹಾಗೂ ಏರ್ ಇಂಡಿಯಾ ಮತ್ತು ಎಂಡಿಎಲ್‌ಆರ್‌ನ ತಲಾ ಒಬ್ಬರು ಪೈಲಟ್‌ಗಳು ನಕಲಿ ಲೈಸನ್ಸ್ ಹೊಂದಿರುವುದು ಬೆಳಕಿಗೆ ಬಂದಿದೆ. ಇದರ ಹೊರತಾಗಿ ನಾಲ್ಕು ಸಾವಿರ ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಲೈಸನ್ಸ್‌ಗಳ ಪರಿಶೀಲನೆಯೂ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.