ADVERTISEMENT

ವಿಮಾನ ಹಾರಾಟ ವಿಳಂಬ, ರದ್ದಾದರೆ ಪರಿಹಾರ: ಸಚಿವ ಜಯಂತ್ ಸಿನ್ಹಾ

ಏಜೆನ್ಸೀಸ್
Published 22 ಮೇ 2018, 10:45 IST
Last Updated 22 ಮೇ 2018, 10:45 IST
ಜಯಂತ್ ಸಿನ್ಹಾ
ಜಯಂತ್ ಸಿನ್ಹಾ   

ನವದೆಹಲಿ: ಇನ್ನು ಮುಂದೆ ವಿಮಾನ ಹಾರಾಟ ರದ್ದು ಅಥವಾ ವಿಳಂಬವಾದರೆ ಪ್ರಯಾಣಿಕರಿಗೆ ವಿಮಾನ ಸಂಸ್ಥೆಗಳು ಪರಿಹಾರ ನೀಡುವಂತಹ ಯೋಜನೆಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ತಿಳಿಸಿದ್ದಾರೆ.

ನಾಗರಿಕ ವಿಮಾನಯಾನ ಇಲಾಖೆಯು ಪ್ರಯಾಣಿಕ ಸ್ನೇಹಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಸಿನ್ಹಾ ತಿಳಿಸಿದ್ದಾರೆ.

ಪ್ರತಿಕೂಲ ಹವಾಮಾನ ಹೊರತುಪಡಿಸಿ ಉಳಿದ ದಿನಗಳಲ್ಲಿ ವಿಮಾನ ಹಾರಾಟ ವಿಳಂಬ ಅಥವಾ ರದ್ದಾದರೆ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಪರಿಹಾರ ನೀಡಬೇಕು. ಪ್ರಸ್ತುತ  ದೇಶಿಯ ವಿಮಾನ ರದ್ದುಗೊಂಡರೆ ರೂ3000 ರೂಪಾಯಿವರೆಗೂ ಪರಿಹಾರ ನೀಡಲಾಗುತ್ತಿದೆ. ನೂತನ ನಿಯಮಾವಳಿಗಳು ಜಾರಿಯಾದರೆ ಪ್ರಯಾಣಿಕರಿಗೆ ಟಿಕೆಟ್‌ನ ಪೂರ್ಣ ಮೊತ್ತವನ್ನು ನೀಡಬೇಕಾಗುತ್ತದೆ. ಇದರ ಜತೆಗೆ ವಿಮಾನ ವಿಳಂಬವಾದರೂ ಪ್ರಯಾಣಿಕರಿಗೆ ಪರಿಹಾರ ದೊರೆಯಲಿದೆ.

ADVERTISEMENT

ಯಾವ ರೀತಿಯಲ್ಲಿ ಪರಿಹಾರ ನಿಡಬೇಕು ಎಂಬುದರ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಜಯಂತ್ ಸಿನ್ಹಾ ಮಾಹಿತಿ ನೀಡಿದರು.

ಒಂದು ವೇಳೆ ವಿಮಾನಯಾನ ಸಂಸ್ಥೆಗಳು ಪರಿಹಾರ ನೀಡದಿದ್ದರೆ ಅಂತಹ ಸಂಸ್ಥೆಗಳ ಮೇಲೆ ದಂಡ ಹಾಕುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಕರಡು ಪ್ರತಿ ಸಿದ್ಧವಾದ ಬಳಿಕ ಅದನ್ನು ವಿಮಾನಯಾನ ಸಂಸ್ಥೆಗಳಿಗೆ ನೀಡಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದು ಜಾರಿ ಮಾಡಲಾಗುವುದು ಎಂದು ಜಯಂತ್ ಸಿನ್ಹಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.