ADVERTISEMENT

ವಿ.ವಿ ಹೆಸರಿನಿಂದ ‘ಹಿಂದೂ’, ‘ಮುಸ್ಲಿಂ’ ಪದ ಕೈಬಿಡಿ

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST

ನವದೆಹಲಿ: ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯಗಳ ಹೆಸರಿನಲ್ಲಿರುವ ‘ಹಿಂದೂ’ ಮತ್ತು ‘ಮುಸ್ಲಿಂ’ ಧರ್ಮವಾಚಕ ಪದಗಳನ್ನು ತೆಗೆದು ಹಾಕುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಸಮಿತಿ ಶಿಫಾರಸು ಮಾಡಿದೆ.

ಸರ್ಕಾರಿ ಅನುದಾನ ಪಡೆಯುವ ಈ ವಿಶ್ವವಿದ್ಯಾಲಯಗಳು ಜಾತ್ಯತೀತ ಸಂಸ್ಥೆಗಳು. ಯಾವುದೇ ಜಾತಿ, ಧರ್ಮಗಳಿಗೆ ಸಂಬಂಧ ಪಟ್ಟಿಲ್ಲ. ಆದರೆ, ಅವುಗಳ ಹೆಸರಿನಲ್ಲಿರುವ ಧರ್ಮಸೂಚಕ ಪದಗಳು ಆ ಸಂಸ್ಥೆಗಳ ಜಾತ್ಯತೀತ ಮನೋಧರ್ಮ ಬಿಂಬಿಸುವುದಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಈ ವಿಶ್ವವಿದ್ಯಾಲಯಗಳನ್ನು ಸರಳವಾಗಿ ಬನಾರಸ್‌ ವಿಶ್ವವಿದ್ಯಾಲಯ ಮತ್ತು ಅಲಿಗಡ ವಿಶ್ವವಿದ್ಯಾಲಯ ಎಂದು ಕರೆಯುವುದು ಸೂಕ್ತ. ಇಲ್ಲವಾದರೆ ಆಯಾ ವಿಶ್ವವಿದ್ಯಾಲಯಗಳ ಸಂಸ್ಥಾಪಕರ ಹೆಸರನ್ನು ಇಡುವುದು ಸೂಕ್ತ ಎಂದು ಸಲಹೆ ಮಾಡಿದೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ADVERTISEMENT

ದೇಶದ ಹತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಲು ಯುಜಿಸಿ ಈ ಸಮಿತಿಯನ್ನು ರಚಿಸಿತ್ತು. ಬನಾರಸ್‌ ಮತ್ತು ಅಲಿಗಡ ವಿಶ್ವವಿದ್ಯಾಲಯಗಳೊಂದಿಗೆ ದೇಶದ ಇನ್ನಿತರ ಎಂಟು ವಿ.ವಿಗಳ ಲೆಕ್ಕಪತ್ರ ಪರಿಶೋಧನೆ ನಡೆಸಿ ಸಮಿತಿ ವರದಿ ಸಲ್ಲಿಸಿದೆ.

ಪಾಂಡಿಚೇರಿ, ಅಲಹಾಬಾದ್‌, ತ್ರಿಪುರಾದ ವಿಶ್ವವಿದ್ಯಾಲಯಗಳು, ಜಾರ್ಖಂಡ್‌, ಜಮ್ಮು ಮತ್ತು ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯ, ಉತ್ತರಾಖಂಡದ ಹೇಮವತಿ ನಂದನ್‌ ಬಹುಗುಣ ಗರವಾಲ್‌ ವಿ.ವಿ, ವಾರ್ಧಾದ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ವಿ.ವಿ., ಮಧ್ಯ ಪ್ರದೇಶದ ಹರಿಸಿಂಗ್‌ ಗೌರ್‌ ವಿಶ್ವವಿದ್ಯಾಲಯಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು.

ಹೆಸರು ಬದಲಾಯಿಸುವ ವಿಚಾರ ಇಲ್ಲ: ಕೇಂದ್ರ ಸ್ಪಷ್ಟನೆ

ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯಗಳ ಹೆಸರು ಬದಲಾಯಿಸುವ ಇರಾದೆ ಇಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.

ಯುಜಿಸಿ ಸಮಿತಿ ಸಲಹೆಯಂತೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಿಂದ ‘ಹಿಂದೂ’ ಹೆಸರನ್ನು ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಹೆಸರಿನಲ್ಲಿರುವ ‘ಮುಸ್ಲಿಂ’ ಶಬ್ದವನ್ನು ಕೈಬಿಡುವ ವಿಚಾರ ಇಲ್ಲ ಎಂದು ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್‌ ಸ್ಪಷ್ಟವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.