ADVERTISEMENT

ವಿಶೇಷ ಸ್ಥಾನಮಾನ ಕೂಗು: ಬುಂದೇಲ್, ಕಾಳಹಂದಿ, ಬಲಂಗೀರ್ ಸರದಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:59 IST
Last Updated 18 ಡಿಸೆಂಬರ್ 2012, 19:59 IST

ನವದೆಹಲಿ: ಉತ್ತರ ಪ್ರದೇಶದ ಬುಂದೇಲ್‌ಖಂಡ್, ಒಡಿಶಾದ ಕಾಳಹಂದಿ, ಬಲಂಗೀರ್ ಸೇರಿದಂತೆ ಹಿಂದುಳಿದ ಕೆಲವು ಪ್ರದೇಶಗಳಿಗೂ ವಿಶೇಷ ಸ್ಥಾನಮಾನ ಕೊಡಬೇಕೆಂಬ ಕೂಗು ಮಂಗಳವಾರ ಲೋಕಸಭೆಯಲ್ಲಿ ಕೇಳಿ ಬಂತು.

ಹೈದರಾಬಾದ್- ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371 (ಜೆ) ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ವಿವಿಧ ಪಕ್ಷಗಳ ಮುಖಂಡರು, ಹಿಂದುಳಿದ ಕೆಲವು ಪ್ರದೇಶಗಳ ಹೆಸರನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಜೆಡಿಯು ಮುಖಂಡ ಶರದ್ ಯಾದವ್ ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಸಿಗುತ್ತಿರುವುದು ಸಂತೋಷದ ಸಂಗತಿ. ಈ ಸಂತೋಷದಲ್ಲಿ ನಾವೂ ಭಾಗಿ. ಆದರೆ, ಉತ್ತರ ಪ್ರದೇಶದ ಬುಂದೇಲ್‌ಖಂಡ್ ಅಭಿವೃದ್ಧಿಗೂ ಸರ್ಕಾರ ಗಮನ ಹರಿಸಬೇಕು ಎಂದರು. ಶರದ್ ಯಾದವ್ ಜತೆ ಡಾ. ಬಲಿರಾಂ ಮತ್ತು ಆರ್.ಕೆ. ಸಿಂಗ್ ಪಾಟೀಲ್ ದನಿಗೂಡಿಸಿದರು. ಬಿಜೆಪಿ ಸದಸ್ಯ ತಥಾಗತ್, ಒಡಿಶಾದ ಕಾಳಹಂದಿ ಮತ್ತು ಬಲಂಗೀರ್‌ಗೂ ವಿಶೇಷ ಪ್ಯಾಕೇಜ್ ಕೊಡಿ ಎಂದರು.

ಟಿಎಂಸಿಯ ಸೌಗತ್‌ರಾಯ್ ಗೂರ್ಖಾಲ್ಯಾಂಡ್ ಆಡಳಿತ ಮಂಡಳಿಗೆ ಹೆಚ್ಚು ಹಣಕಾಸು ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಇಟ್ಟರು. ಶಿವಸೇನೆಯ ಅನಂತಗೀತೆ ಮಹಾರಾಷ್ಟ್ರದ ಕೊಂಕಣ ಭಾಗಕ್ಕೂ ಹೈದರಾಬಾದ್- ಕರ್ನಾಟಕ ಮಾದರಿಯಲ್ಲಿ ವಿಶೇಷ ಸ್ಥಾನಮಾನ ಕೊಡಬೇಕೆಂದು ಒತ್ತಾಯಿಸಿದರು. ಡಾ.ಅಜಯ್ ಕುಮಾರ್ ಜಾರ್ಖಂಡ್‌ನ ಸಂತಾಲ್ ಪರಗಣದ ಅಭಿವೃದ್ಧಿಗೆ ಸರ್ಕಾರ ಆಸಕ್ತಿ ವಹಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT