ADVERTISEMENT

ಶರಣಾಗಲು ಕಾಲಾವಕಾಶಕ್ಕೆ ಮೊರೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ಶರಣಾಗಲು ಕಾಲಾವಕಾಶಕ್ಕೆ ಮೊರೆ
ಶರಣಾಗಲು ಕಾಲಾವಕಾಶಕ್ಕೆ ಮೊರೆ   

ನವದೆಹಲಿ (ಪಿಟಿಐ): ಶರಣಾಗತಿಗೆ ಇನ್ನೂ ಆರು ತಿಂಗಳ  ಕಾಲಾವಕಾಶ ನೀಡಬೇಕು ಎಂದು ನಟ ಸಂಜಯ್ ದತ್ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಈಗಾಗಲೇ ತಾವು ಹಲವು ಚಿತ್ರಗಳಲ್ಲಿ ನಟಿಸಲು ಒಪ್ಪಿದ್ದು, ನಿರ್ಮಾಪಕರು ಈ ಚಿತ್ರಗಳ ಮೇಲೆ ಭಾರಿ ಬಂಡವಾಳ ಹೂಡಿದ್ದಾರೆ. ಈಗ ಶರಣಾದರೆ ಚಿತ್ರಗಳ ನಿರ್ಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಶರಣಾಗತಿಗೆ ಹೆಚ್ಚು ಕಾಲಾವಕಾಶ ನೀಡಬೇಕು ಎಂದು ಸಂಜಯ್ ದತ್ ಸುಪ್ರೀಂ ಕೋರ್ಟ್‌ಗೆ ಕೋರಿದ್ದಾರೆ.

1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ದತ್ ಅವರು ಈಗಾಗಲೇ ಒಂದೂವರೆ ವರ್ಷ ಜೈಲಿನಲ್ಲಿ ಕಳೆದಿದ್ದು, ಇನ್ನು ಮೂರೂವರೆ ವರ್ಷಗಳ ಶಿಕ್ಷೆ ಅನುಭವಿಸಬೇಕಾಗಿದೆ. ಮಾರ್ಚ್ 21ರಂದು ಪ್ರಕರಣದ ಅಂತಿಮ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಶರಣಾಗತಿಗೆ ನಾಲ್ಕು ವಾರಗಳ ಕಾಲಾವಕಾಶ ದತ್ ಅವರಿಗೆ ನೀಡಿತ್ತು. ಈ ಅವಧಿಯು ಏಪ್ರಿಲ್ 18ಕ್ಕೆ ಕೊನೆಗೊಳ್ಳಲಿದೆ.

ಇತರ ಅಪರಾಧಿಗಳಿಂದಲೂ ಮನವಿ: ದತ್ ಹೊರತಾಗಿ, ಇದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಇತರ ತಪ್ಪಿತಸ್ಥರಾದ ಜೈಬುನ್ನಿಸಾ ಅನ್ವರ್ ಖಾಜಿ, ಐಸಾಕ್ ಮೊಹಮ್ಮದ್ ಹಜ್ವಾನೆ ಮತ್ತು ಅಬ್ದುಲ್ ಗಫೂರ್ ಪಾರ್ಕರ್ ಅಲಿಯಾಸ್ ದಾದಾಭಾಯ್ ಅವರು ಕೂಡ ಶರಣಾಗತಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ  ಮನವಿ ಮಾಡಿದ್ದಾರೆ.

ತಮ್ಮ ಕ್ಷಮಾದಾನದ ಅರ್ಜಿಗಳ ಬಗ್ಗೆ  ರಾಷ್ಟ್ರಪತಿಯವರು ನಿರ್ಧಾರ ಕೈಗೊಳ್ಳುವವರೆಗೆ ಶರಣಾಗತಿ ಅವಧಿಯನ್ನು ವಿಸ್ತರಿಸಬೇಕು ಎಂದು ಅವರು ಅರ್ಜಿಯಲ್ಲಿ  ತಿಳಿಸಿದ್ದಾರೆ.

ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಮಾರ್ಕಂಡೇಯ ಕಟ್ಜು ಅವರು ಖಾಜಿ ಪರವಾಗಿ ಮಾರ್ಚ್ 18ರಂದು ಮತ್ತು ಉಳಿದಿಬ್ಬರ ಪರವಾಗಿ ಏಪ್ರಿಲ್ 10ರಂದು ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಅವರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು.

ದತ್ ಮನವಿ ತಿರಸ್ಕರಿಸಿದ ಟಾಡಾ ನ್ಯಾಯಾಲಯ: ಈ ಮಧ್ಯೆ, ನ್ಯಾಯಾಲಯದ ಬದಲಿಗೆ ಜೈಲಿನ ಅಧಿಕಾರಿಗಳ ಮುಂದೆ ಶರಣಾಗಲು ಅವಕಾಶ ನೀಡಬೇಕು ಎಂಬ ಸಂಜಯ್ ದತ್ ಮನವಿಯನ್ನು ಟಾಡಾ ನ್ಯಾಯಾಲಯ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್‌ನ ಆದೇಶದ ಅನ್ವಯ ದತ್ ಅವರು ಏಪ್ರಿಲ್18ರ ಒಳಗಾಗಿ ಟಾಡಾ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿದೆ.
ಜೈಲು ಅಧಿಕಾರಿಗಳ ಮುಂದೆ ಶರಣಾಗಲು  ದತ್ ಅವರಿಗೆ ಅವಕಾಶ ನೀಡಬೇಕು ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಮೌಖಿಕವಾಗಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.