ADVERTISEMENT

ಶಾಲೆಗೆ ಸೇರಿದ ಕೊಳೆಗೇರಿ ಬಾಲಕ ಕುಮಾರ್

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಇಲ್ಲಿನ ಬೀದಿಗಳಲ್ಲಿ ಇತರ ಬೀದಿ ಮಕ್ಕಳ ಜತೆ ಆಟವಾಡುತ್ತ, ರದ್ದಿ ಮತ್ತು ಚಿಂದಿ ವಸ್ತುಗಳನ್ನು ಆಯ್ದು ಕಾಲ ಕಳೆಯುತ್ತಿದ್ದ ರಾಜ ಕುಮಾರ 13 ವಯಸ್ಸಿನ ಬಾಲಕ. ಸಂಚಾರಿ ಕಲಿಕಾ ಕೇಂದ್ರದಲ್ಲಿ ಕಲಿತು ಈಗ  ಸರ್ಕಾರಿ ಶಾಲೆ ಸೇರಿದ್ದಾನೆ.

ಕಳೆದು ತಿಂಗಳು ಕೊಳೆಗೇರಿ ಹಾಗೂ ಬೀದಿ ಮಕ್ಕಳ ರಕ್ಷಣೆ ಹಾಗೂ ಶಿಕ್ಷಣ ಕಲಿಕೆಗಾಗಿ ಪ್ರಾರಂಭವಾದ ಸಂಚಾರಿ ಕೇಂದ್ರದಿಂದ ಒಕ್ಲಾ ಪ್ರದೇಶದಲ್ಲಿರುವ ಕೊಳೆಗೇರಿಯ ನಿವಾಸಿ ಕುಮಾರ್ ಪ್ರಾಥಮಿಕ ಶಿಕ್ಷಣ ಪಡೆದು ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾನೆ.

`ನಮ್ಮದು ಐವರು ಸದಸ್ಯರನ್ನು ಹೊಂದಿರುವ ಕುಟುಂಬ. ತಂದೆಯೊಬ್ಬರಿಂದ ಜೀವನ ನಡೆಯಬೇಕು, ನಾನೂ ದುಡಿದು ಕುಟುಂಬಕ್ಕೆ ನೆರವಾಗಬೇಕು~ ಎಂದು ಒಕ್ಲಾದಲ್ಲಿರುವ ನೂತನ `ಸಂಜಯ್~ ಶಿಬಿರದಲ್ಲಿರುವ ಕುಮಾರ್ ಹೇಳಿದ್ದಾನೆ.

`ನನಗೆ ಓದಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ನಾನು ಇಂಥ ಅವಕಾಶ ಸಿಗುತ್ತದೆ ಎಂದು ಕನಸ್ಸಿನಲ್ಲಿಯೂ ಯೋಚಿಸಿರಲಿಲ್ಲ~ ಎಂದು ಕುಮಾರ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾನೆ.

 `ನಾನು ಚೆನ್ನಾಗಿ ಓದಿ, ಭದ್ರತೆ ಹಾಗೂ ಉತ್ತಮ ಉದ್ಯೋಗ ಪಡೆಯುವ ಕಡೆಗೆ ದೃಷ್ಟಿ ಹರಿಸಿದ್ದೇನೆ ಎಂದಿರುವ ಕುಮಾರ್, ನನ್ನಂತೆ ಇರುವ ಇತರ ಮಕ್ಕಳು ಸಂಚಾರಿ ಕಲಿಕಾ ಕೇಂದ್ರಕ್ಕೆ ಸೇರಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದ್ದಾನೆ.

 ಸಂಚಾರಿಯ ವಾಹನವು ಶಾಲೆ ಹಾಗೂ ಬೀದಿ ಮಕ್ಕಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದ್ದು, ಇದು ರದ್ದಿ ಆಯುವ, ಭಿಕ್ಷೆ ಬೇಡುವ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡುತ್ತದೆ. ಈ ಕೇಂದ್ರ ಮಕ್ಕಳಿಗೆ ಕಲಿಕೆಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ.

ಇತ್ತೀಚಿನ ದಿನಗಳಲ್ಲಿ ಕಲಿಕಾ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಎರಡು ವಾರಗಳಲ್ಲಿ 38ರಿಂದ 53ಕ್ಕೆ ಏರಿಕೆ ಆಗಿದೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಕೊಳೆಗೇರಿಗಳಲ್ಲಿ ಸಂಚಾರಿ ಕಲಿಕಾ ವಾಹನಗಳು ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿ ಸುಮಾರು 50 ಸಾವಿರ ಬೀದಿ ಮಕ್ಕಳು ಇದ್ದಾರೆ ಎಂದು  ಸಾಮಾಜಿಕ ಸಂಸ್ಥೆಯೊಂದು ಸಮೀಕ್ಷೆ ನಡೆಸಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.