ADVERTISEMENT

ಶೇಖರ್‌ ಬಂಧನಕ್ಕೆ ‘ಸುಪ್ರೀಂ’ ತಡೆ

ಪಿಟಿಐ
Published 22 ಮೇ 2018, 19:50 IST
Last Updated 22 ಮೇ 2018, 19:50 IST

ನವದೆಹಲಿ: ಮಾಧ್ಯಮ ಕ್ಷೇತ್ರದ ಮಹಿಳೆಯರ ಕುರಿತಾಗಿ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ವಿವಾದಕ್ಕೆ ಕಾರಣರಾಗಿದ್ದ ನಟ, ಬಿಜೆಪಿ ಮುಖಂಡ ಎಸ್‌.ವಿ.ಶೇಖರ್‌ ಬಂಧನಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.

ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ಹಾಗೂ ನವೀನ್‌ ಸಿನ್ಹಾ ಒಳಗೊಂಡ ಪೀಠ, ಶೇಖರ್‌ ಅವರನ್ನು ಜೂನ್‌ 1ರವರೆಗೆ ಬಂಧಿಸದಂತೆ ಮಧ್ಯಂತರ ತಡೆ ನೀಡಿದೆ. ಶೇಖರ್‌ ಸಲ್ಲಿಸಿದ್ದ ಅರ್ಜಿಗೆ ಯಾವುದೇ ಪ್ರತಿಕ್ರಿಯೆ ನೀಡದ ತಮಿಳುನಾಡು ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಮಹಿಳೆಯರ ವಿರುದ್ಧದ ದೌರ್ಜನ್ಯ ತಡೆ ಕಾಯ್ಡೆಯಡಿ ತಮಿಳುನಾಡಿನ ಸೈಬರ್‌ ಅಪರಾಧ ಘಟಕ, ಶೇಖರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್‌ ಹೈಕೋರ್ಟ್‌ಗೆ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ಇದನ್ನು ತಿರಸ್ಕರಿಸಿತ್ತು.

ADVERTISEMENT

ಈ ಆದೇಶದ ವಿರುದ್ಧ ಶೇಖರ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಶೇಖರ್‌ ಅವರ ಅರ್ಜಿ ವಿಚಾರಣೆಯನ್ನು ಜೂನ್‌ 1ಕ್ಕೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಅಲ್ಲಿಯವರೆಗೆ ಅವರನ್ನು ಬಂಧಿಸಬಾರದು ಎಂದು ಪೀಠ ಹೇಳಿದೆ.

‘ಆ ಪೋಸ್ಟ್‌ ನಾನು ಬರೆದಿದ್ದಲ್ಲ’ ಎಂದು ಶೇಖರ್‌ ಪೀಠಕ್ಕೆ ತಿಳಿಸಿದ್ದರು. ದೇಶದಾದ್ಯಂತ ಪತ್ರಕರ್ತರು ಶೇಖರ್‌ ವಿರುದ್ಧ ಪ್ರತಿಭಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.