ADVERTISEMENT

ಶೇ 50ರಷ್ಟು ತೇರ್ಗಡೆ ಆಗುವುದು ಕಡ್ಡಾಯ

ಪಿಟಿಐ
Published 13 ಮೇ 2018, 19:30 IST
Last Updated 13 ಮೇ 2018, 19:30 IST

ನವದೆಹಲಿ: ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ನೀಡುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಬರುವ ಶಾಲೆಗಳಲ್ಲಿ ಈ ಯೋಜನೆಯ ಫಲಾನುಭವಿಗಳಾಗಿರುವ ಕನಿಷ್ಠ ಶೇ 50ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಲೇಬೇಕು. ಇಲ್ಲದಿದ್ದರೆ ಅಂತಹ ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.

ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ ನಡೆಯುವುದನ್ನು ತ‍ಪ್ಪಿಸುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಶಾಲೆಗಳ ನಿಯಮಾವಳಿಗಳನ್ನು
ಪರಿಷ್ಕರಿಸಿದೆ. 

‘ನಕಲಿ ಪ್ರವೇಶ ದಾಖಲೆಗಳನ್ನು ತೋರಿಸಿ ಶಿಕ್ಷಣ ಸಂಸ್ಥೆಗಳು ಈ ವಿದ್ಯಾರ್ಥಿ ವೇತನ ಯೋಜನೆ ಅಡಿಯಲ್ಲಿ ಭಾರಿ ಮೊತ್ತದ ಹಣ ಸಂಗ್ರಹಿಸಿದ ಉದಾಹರಣೆಗಳು ಇವೆ. ಜತೆಗೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ವಿದ್ಯಾರ್ಥಿ ವೇತನ ಪಡೆದುಕೊಂಡು ಬಳಿಕ ಅವರಿಗೆ ಸೂಕ್ತ ಶಿಕ್ಷಣ ನೀಡದೆ ಅವರು ಅನುತ್ತೀರ್ಣರಾಗುವ ಪ್ರಕರಣಗಳು ಸಹ ಇವೆ. ಪರಿಷ್ಕೃತ ನಿಯಮಾವಳಿಯಿಂದ ಇಂತಹ ಅಕ್ರಮಗಳಿಗೆ ಕಡಿವಾಣ ಬೀಳಲಿದೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ADVERTISEMENT

ಪಾರದರ್ಶಕತೆಗೆ ಆನ್‌ಲೈನ್ ಪ್ರಕ್ರಿಯೆ: ನಕಲಿ ದಾಖಲೆಗಳಿಗೆ ಕಡಿವಾಣ ಹಾಕಿ ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ, ದಾಖಲೆಗಳನ್ನು ಹಾಗೂ ಅರ್ಹತಾ ಮಾನದಂಡವನ್ನು ಆನ್‌ಲೈನ್ ಮೂಲಕ ಪರಿಶೀಲಿಸಲಾಗುತ್ತದೆ.

ವಿದ್ಯಾರ್ಥಿಗಳ ಖಾತೆಗೆ ನೇರ ಜಮಾ
ಪರಿಷ್ಕೃತ ನಿಯಮದ ಪ್ರಕಾರ, ವಿದ್ಯಾರ್ಥಿವೇತನದ ಮೊತ್ತ ಇನ್ನುಮುಂದೆ ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೇ ನೇರವಾಗಿ ಜಮೆಯಾಗುತ್ತದೆ.

ಪ್ರಸ್ತುತ, ಸರ್ಕಾರ ಬಿಡುಗಡೆ ಮಾಡುವ ವಿದ್ಯಾರ್ಥಿ ವೇತನದ ಮೊತ್ತವನ್ನು ಶಿಕ್ಷಣ ಸಂಸ್ಥೆಗಳಿಗೆ ಹಾಗೂ ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.