ADVERTISEMENT

ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 20:15 IST
Last Updated 6 ಡಿಸೆಂಬರ್ 2017, 20:15 IST
ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ
ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ   

ನವದೆಹಲಿ: ಎಲ್ಲ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಬೇಕು ಎಂಬ ಸಲಹೆಗೆ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ನೇತೃತ್ವದ ಸಮಿತಿ ಬೆಂಬಲ ಸೂಚಿಸಿದೆ.

ಖಾಸಗಿಯೂ ಸೇರಿ ಎಲ್ಲ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು ಎಂದೂ ಈ ಸಮಿತಿ ಶಿಫಾರಸು ಮಾಡಿದೆ.

‘ಪೂರ್ವ ಪ್ರಾಥಮಿಕ ಶಿಕ್ಷಣವು ಮಕ್ಕಳನ್ನು ಪ್ರಾಥಮಿಕ ಶಿಕ್ಷಣಕ್ಕೆ ಸನ್ನದ್ಧಗೊಳಿಸುತ್ತದೆ. ಪ್ರಾಥಮಿಕ ತರಗತಿಗಳು ನಡೆಯುವ ಎಲ್ಲ ಶಾಲೆಗಳಲ್ಲಿ ಆರಂಭಿಕ ಬಾಲ್ಯದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಕೇಂದ್ರದ ಶಿಕ್ಷಣ ಸಲಹಾ ಮಂಡಳಿಯ (ಸಿಎಬಿಇ) 12 ಸದಸ್ಯರ ಉಪ ಸಮಿತಿ ಇತ್ತೀಚಿನ ಸಭೆಯಲ್ಲಿ ಶಿಫಾರಸು ಮಾಡಿತ್ತು.

ADVERTISEMENT

ಮಾನವ ಸಂಪನ್ಮೂಲ ಸಚಿವಾಲಯ (ಎಚ್‌ಆರ್‌ಡಿ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳು (ಡಬ್ಲ್ಯುಸಿಡಿ) ಈಗಾಗಲೇ ಈ ಬಗ್ಗೆ ಯೋಚನೆ ಆರಂಭಿಸಿವೆ. ಹಾಗಾಗಿ ಸಮಿತಿಯ ಶಿಫಾರಸು ಮಹತ್ವ ಪಡೆದುಕೊಂಡಿದೆ.

ಅಂಗನವಾಡಿ ಕೇಂದ್ರಗಳನ್ನು ಆ ಪ್ರದೇಶದ ಸರ್ಕಾರಿ ಶಾಲೆಗಳ ಜತೆಗೆ ಸೇರಿಸಿ ಎಂದು ಈ ಎರಡೂ ಸಚಿವಾಲಯಗಳು ಜತೆಯಾಗಿ ರಾಜ್ಯಗಳಿಗೆ ಇತ್ತೀಚೆಗೆ ಸೂಚನೆ ನೀಡಿದ್ದವು. ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಆರಂಭಿಕ ಬಾಲ್ಯ ಶಿಕ್ಷಣ ನೀಡುವುದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ತರಬೇತಿ ನೀಡುವ ಅಭಿಯಾನವನ್ನು ಡಬ್ಲ್ಯುಸಿಡಿ ಇತ್ತೀಚೆಗೆ ಆರಂಭಿಸಿದೆ.

ಸಿಎಬಿಇ– ಕೇಂದ್ರ ಸರ್ಕಾರಕ್ಕೆ ಶಿಕ್ಷಣದ ವಿಚಾರದಲ್ಲಿ ಸಲಹೆ ನೀಡುವ ಅತ್ಯುನ್ನತ ಸಮಿತಿಯಾಗಿದೆ. ಈ ಸಮಿತಿಯು ಎಚ್‌ಆರ್‌ಡಿ ಖಾತೆಯ ರಾಜ್ಯ ಸಚಿವ ಉಪೇಂದ್ರ ಕುಶ್ವಾಹ ನೇತೃತ್ವದಲ್ಲಿ 2015ರ ಆಗಸ್ಟ್‌ನಲ್ಲಿ ಉಪ ಸಮಿತಿಯನ್ನು ರಚಿಸಿತ್ತು.

ಶಾಲಾ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ಶಿಕ್ಷಕರ ಕಾರ್ಯಕ್ಷಮತೆಯ ಮೌಲ್ಯಮಾಪನ ವ್ಯವಸ್ಥೆ ಜಾರಿಗೆ ತರಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.

‘ಶಾಲೆಗಳ ಪಠ್ಯಕ್ರಮದಲ್ಲಿ ವೃತ್ತಿ ತರಬೇತಿ ಸೇರ್ಪಡೆಯಾಗಬೇಕು. ಇಲ್ಲಿ ಪಡೆದ ವೃತ್ತಿ ತರಬೇತಿಗೆ ಸರ್ಕಾರದ ಸಂಸ್ಥೆಯೊಂದರ ಮೂಲಕ ಪ್ರಮಾಣಪತ್ರ ನೀಡಬೇಕು ಎಂದೂ ಸಮಿತಿ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.