ADVERTISEMENT

ಸಿ.ಎಂಗಳ ಸಭೆ: ಕೇಂದ್ರದ ವಿರುದ್ಧ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ನವದೆಹಲಿಯಲ್ಲಿ ಸೋಮವಾರ ನಡೆದ ಮುಖ್ಯಮಂತ್ರಿಗಳ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫ್ಯೂ ರಿಯೊ ಹಾಗೂ ಇತರರು ಭಾಗವಹಿಸಿದ್ದರು 	- ಪಿಟಿಐ ಚಿತ್ರ
ನವದೆಹಲಿಯಲ್ಲಿ ಸೋಮವಾರ ನಡೆದ ಮುಖ್ಯಮಂತ್ರಿಗಳ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ನೈಫ್ಯೂ ರಿಯೊ ಹಾಗೂ ಇತರರು ಭಾಗವಹಿಸಿದ್ದರು - ಪಿಟಿಐ ಚಿತ್ರ   

ನವದೆಹಲಿ: ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಸಭೆಯನ್ನು ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡರು.

 ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವನ್ನು ಈಗಾಗಲೇ ಜಾರಿಗೊಳಿಸಿರುವ ಹೊರತಾಗಿಯೂ, ಆಡಳಿತ ಸುಧಾರಣೆಗಳ ಆಯೋಗ ಮಾಡಿರುವ, ಒಕ್ಕೂಟ ವ್ಯವಸ್ಥೆ `ಉಲ್ಲಂಘಿಸುವ' ಮತ್ತು `ಹಳೆಯದಾದ' ಶಿಫಾರಸುಗಳನ್ನು ರಾಜ್ಯಗಳ ಮೇಲೆ ಹೇರಲು ಯುಪಿಎ ಯತ್ನಿಸುತ್ತಿದೆ ಎಂದು ವಿವಿಧ ರಾಜ್ಯಗಳ  ಮುಖ್ಯಮಂತ್ರಿಗಳು ಆರೋಪಿಸಿದರು.

ಹಲವರ ಗೈರು: `ಕಾನೂನು ಸುವ್ಯವಸ್ಥೆ' ಬಗ್ಗೆ 2ನೇ ಆಡಳಿತ ಸುಧಾರಣೆಗಳ ಆಯೋಗ ನೀಡಿರುವ ಐದನೇ ವರದಿಯ ಕುರಿತಾಗಿ ನಡೆದ ಸಮ್ಮೇಳನದಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಗೈರುಹಾಜರಾಗಿದ್ದರು. ಇವರಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಸೇರಿದ್ದಾರೆ.
ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಕೇಂದ್ರದ ಯತ್ನವನ್ನು ಈ ಹಿಂದೆ ಟೀಕಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಗೆ ಹಾಜರಾಗಿರಲಿಲ್ಲ. ಆದರೆ ಸಭೆಯಲ್ಲಿ ಅವರ ಭಾಷಣವನ್ನು ಓದಲಾಯಿತು.

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಿದರು.ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಸಚಿವರಾದ ಕಪಿಲ್‌ಸಿಬಲ್, ಜೈರಾಂ ರಮೇಶ್, ವೀರಪ್ಪ ಮೊಯಿಲಿ, ಸಿ.ಪಿ ಜೋಶಿ, ನಾರಾಯಣ್ ಸ್ವಾಮಿ ಹಾಗೂ ಗೃಹ ಖಾತೆ ರಾಜ್ಯ ಸಚಿವರಾದ ಆರ್‌ಪಿಎನ್ ಸಿಂಗ್ ಮತ್ತು ಮಲ್ಲಪಲ್ಲಿ ರಾಮಚಂದ್ರನ್ ಸಭೆಯಲ್ಲಿ ಭಾಗವಹಿಸಿದ್ದರು.

ಶಿಂಧೆ ಭರವಸೆ: ಮುಖ್ಯಮಂತ್ರಿಗಳ ಸಭೆಯ ನಂತರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ರಾಜ್ಯಗಳೊಂದಿಗೆ ಮಾತುಕತೆ ನಡೆಸದೇ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವುದಿಲ್ಲ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.