ADVERTISEMENT

ಸುನೀತಾಗೆ ವಿಜ್ಞಾನ ಶಿಕ್ಷಕಿಯಾಗುವ ಕನಸು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಮುಂಬೈ (ಪಿಟಿಐ): `ಚಂದ್ರಯಾನ ನನ್ನ ಮುಂದಿನ ಗುರಿ. ಆದರೆ ಭವಿಷ್ಯದಲ್ಲಿ ನನಗೆ ವಿಜ್ಞಾನ ಶಿಕ್ಷಕಿಯಾಗಬೇಕೆಂಬ ಆಸೆ ಇದೆ' ಎಂದು ಭಾರತೀಯ ಸಂಜಾತೆ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ ಅಭಿಪ್ರಾಯಪಟ್ಟರು.

`ನಾವು ಬಾಹ್ಯಾಕಾಶ ನೌಕೆಯನ್ನು ಸಿದ್ಧಪಡಿಸುತ್ತಿದ್ದೇವೆ. ಅದರ ಭಾಗವಾಗಬೇಕೆಂದು ನನ್ನ ಬಯಕೆಯಾಗಿದೆ. ಇಂಥ ನೌಕೆಯ ನಿರ್ಮಾಣದಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನುಭವ ಹೊಂದಿರುವವರನ್ನು ಬಳಸಿಕೊಂಡರೆ, ಆ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ' ಎಂದು ಸುನೀತಾ ವಿವರಿಸಿದರು.

ಭಾರತದ ಪ್ರವಾಸದಲ್ಲಿರುವ ಸುನೀತಾ ವಿಲಿಯಮ್ಸ, ಗುರುವಾರ ಇಲ್ಲಿನ ನೆಹರೂ ವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, `ನನ್ನ ಈ ಎಲ್ಲ ಬೆಳವಣಿಗೆಗಳು ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿವೆ. ಆದರೂ ನನಗೆ ಭವಿಷ್ಯದಲ್ಲಿ ಒಬ್ಬ ವಿಜ್ಞಾನ ಶಿಕ್ಷಕಿಯಾಗಬೇಕು ಎಂಬ ಆಸೆ ಇದೆ' ಎಂದರು.

`ಬಾಹ್ಯಾಕಾಶ ಯಾನದಲ್ಲಿದ್ದಾಗ ನಿಮಗೆ ಒಂಟಿತನ ಕಾಡಲಿಲ್ಲವೇ' ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸುನೀತಾ, `ಖಂಡಿತಾ ಇಲ್ಲ. ನಾನು ಒಂಟಿ ಎಂದು ಎನಿಸಲಿಲ್ಲ. ಆ ಮಟ್ಟಿಗೆ ಭೂಮಿಯೊಂದಿಗೆ ನಿರಂತರ ಸಂಪರ್ಕವಿತ್ತು. ಗೆಳೆಯರು, ಕುಟುಂಬದವರೊಂದಿಗೆ ದೂರವಾಣಿ ಮೂಲಕ ಮಾತನಾಡುವಷ್ಟರ ಮಟ್ಟಿಗೆ ಸಂಪರ್ಕವಿತ್ತು' ಎಂದು ಹೇಳಿದರು.

`ನನಗೆ ಚಂದ್ರಯಾನ ಮಾಡಬೇಕೆಂಬ ಕನಸು ಇದೆ. ಮನಸ್ಸಿನಲ್ಲಿ ಮಂಗಳಯಾನ ಕೈಗೊಳ್ಳುವ ತುಡಿತವಿದೆ. ಇವೆಲ್ಲದಕ್ಕಿಂತ ಮುಖ್ಯವಾಗಿ ನಾನೊಬ್ಬ ವೃತ್ತಿಪರ ಬಾಹ್ಯಾಕಾಶ ವಿಜ್ಞಾನಿಯಾಗಬೇಕು' ಎಂದು ಸುನೀತಾ ಭವಿಷ್ಯದ ಕನಸುಗಳನ್ನು ಮಕ್ಕಳೆದುರು ಬಿಚ್ಚಿಟ್ಟರು.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಹಯೋಗದ ಬಗ್ಗೆ ಮಾತನಾಡಿದ ಸುನೀತಾ, `ಅಮೆರಿಕದ ನಾಸಾ ದಲ್ಲಿ ಕೆಲಸ ಮಾಡುತ್ತಿರುವ ನನಗೆ, ಉಭಯ ದೇಶಗಳ ನಡುವಿನ ಬಾಂಧವ್ಯ ವೃದ್ಧಿಯಾಗುತ್ತಿರುವುದು ಹಾಗೂ ನಾಸಾ ಮತ್ತು ಇಸ್ರೊ ನಡುವಿನ ಸಂಬಂಧಗಳು ಗಟ್ಟಿಗೊಳ್ಳುತ್ತಿರುವುದನ್ನೂ ಗಮನಿಸಿದ್ದೇನೆ. ಇವೆಲ್ಲ ಉತ್ತಮ ಬೆಳವಣಿಗೆಗಳು' ಎಂದರು.

47ರ ಹರೆಯದ ಸುನೀತಾ ವಿಲಿಯಮ್ಸ ಅವರು ದೀರ್ಘಕಾಲ ಬಾಹ್ಯಾಕಾಶ ನಡಿಗೆ ಕೈಗೊಳ್ಳುವ ಮೂಲಕ ವಿಶ್ವ ದಾಖಲೆ ಬರೆದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.