ADVERTISEMENT

ಸುಶೀಲ್‌ಗೆ ಬೆಳ್ಳಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST
ಸುಶೀಲ್‌ಗೆ ಬೆಳ್ಳಿ ಸಂಭ್ರಮ
ಸುಶೀಲ್‌ಗೆ ಬೆಳ್ಳಿ ಸಂಭ್ರಮ   

ಕುಸ್ತಿಯಲ್ಲಿ ಭಾರತದ ಪೈಲ್ವಾನ್‌ನ ಮಹತ್ವದ ಸಾಧನೆ

ಲಂಡನ್: ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಿ ಕೋಟಿ ಕನಸುಗಳನ್ನು ಹೊತ್ತು ನಡೆದಿದ್ದ ಸುಶೀಲ್ ಕುಮಾರ್, ದೇಶಕ್ಕೆ ಬಹುದೊಡ್ಡ ಉಡುಗೊರೆ ನೀಡಿದ್ದಾರೆ. ಕುಸ್ತಿಯಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅವರು ಬೆಳ್ಳಿಯ ಹೊಂಗಿರಣ ಮೂಡಿಸಿದ್ದಾರೆ.

ಎಕ್ಸ್‌ಸೆಲ್ ನಾರ್ಥ್ ಅರೆನಾದಲ್ಲಿ ಭಾನುವಾರ ನಡೆದ ಪುರುಷರ ಕುಸ್ತಿಯ 66 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಸುಶೀಲ್ ಬೆಳ್ಳಿ ಪದಕ ಗೆದ್ದು ವಿಜಯ ವೇದಿಕೆಯಲ್ಲಿ ಮಿಂಚಿದರು. ಫೈನಲ್ ಹೋರಾಟದಲ್ಲಿ ಜಪಾನ್‌ನ ತತ್ಸುಹಿರೊ ಯೊನೆಮಿತ್ಸು ಎದುರು 1-3ರಲ್ಲಿ ಸೋಲು ಕಂಡರೂ, ಭಾರತದ ಈ ಕುಸ್ತಿಪಟು ಐತಿಹಾಸಿಕ ಸಾಧನೆಯೊಂದಕ್ಕೆ ಕಾರಣರಾದರು.

ಏಕೆಂದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಇವರು. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಗೆದ್ದಿದ್ದರು. ಈ ಬಾರಿ ಮತ್ತಷ್ಟು ಉತ್ತಮ ಸಾಧನೆ ಮೂಲಕ ರಜತ ಪದಕದೊಂದಿಗೆ ಸಂಭ್ರಮಿಸಿದರು.

ಬಹುಮಾನದ ಸುರಿಮಳೆ: 29 ವರ್ಷ ವಯಸ್ಸಿನ ಸುಶೀಲ್ ಅವರ ಈ ಸಾಧನೆಗೆ ಹರಿಯಾಣ ಸರ್ಕಾರ ರೂ 1.5 ಕೋಟಿ, ದೆಹಲಿ ಸರ್ಕಾರ ರೂ 1 ಕೋಟಿ ಹಾಗೂ ರೈಲ್ವೆ ಇಲಾಖೆ ರೂ 75 ಲಕ್ಷ  ಬಹುಮಾನ ಪ್ರಕಟಿಸಿವೆ. ಬೆಳ್ಳಿ ಪದಕದ ಸಾಧಕನನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅಭಿನಂದಿಸಿದ್ದಾರೆ.

ಕ್ರೀಡಾ ಸ್ಫೂರ್ತಿ: ಸೆಮಿಫೈನಲ್ ಪೈಪೋಟಿ ಬಳಿಕ ಸುಶೀಲ್ ವಾಂತಿ ಮಾಡಿಕೊಂಡು ಸುಸ್ತಾಗಿದ್ದರು. ಕಣ್ಣಿಗೂ ತೀವ್ರ ಪೆಟ್ಟಾಗಿತ್ತು. ಆದರೂ ಫೈನಲ್‌ನಲ್ಲಿ ಸ್ಪರ್ಧಿಸಿ ಕ್ರೀಡಾ ಸ್ಫೂರ್ತಿ ಮೆರೆದರು. `ಅನಾರೋಗ್ಯ ಕಾರಣ ಫೈನಲ್‌ನಲ್ಲಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಬೆಳ್ಳಿಗೆ ಸಮಾಧಾನಪಡಬೇಕಾಯಿತು. ಆದರೆ ಮುಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಬರುತ್ತೇನೆ~ ಎಂದು ಪದಕ ಪ್ರದಾನ ಸಮಾರಂಭದ ಬಳಿಕ ಸುಶೀಲ್ ನುಡಿದರು.

ಸುಶೀಲ್ ತಮ್ಮ ಮೊದಲ ಬೌಟ್‌ನಲ್ಲಿ ಟರ್ಕಿಯ ರಮಜಾನ್ ಸಾಹಿನ್ ಎದುರು 3-1ರಲ್ಲಿ ಜಯ ಗಳಿಸಿದರು. ವಿಶೇಷವೆಂದರೆ ಸಾಹಿನ್ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.  ಅದು ಮುಂದಿನ ಪೈಪೋಟಿಗೆ ಸ್ಫೂರ್ತಿಯಾಯಿತು.

ಕುಸ್ತಿಯಲ್ಲಿ ಸಾಧನೆ:  2008ರ ಒಲಿಂಪಿಕ್ಸ್‌ನಲ್ಲಿ ಮೂವರು ಕುಸ್ತಿಪಟುಗಳು ಸ್ಪರ್ಧಿಸಿದ್ದರು. ಈ ಬಾರಿ ಐದು ಮಂದಿ ಇದ್ದರು. ಅದರಲ್ಲಿ ಇಬ್ಬರು ಪದಕ ಗೆದ್ದುಕೊಟ್ಟಿದ್ದಾರೆ. ಶನಿವಾರ ಯೋಗೀಶ್ವರ್ ದತ್ (60 ಕೆ.ಜಿ. ಫ್ರೀಸ್ಟೈಲ್) ಕಂಚಿನ ಪದಕ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ ಕ್ರೀಡಾಕೂಟಗಳ ಕುಸ್ತಿಯಲ್ಲಿ ಭಾರತ ಒಟ್ಟು ನಾಲ್ಕು ಪದಕ ಗೆದ್ದಂತಾಗಿದೆ. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಕೆ. ಜಾಧವ್ ಕುಸ್ತಿಯಲ್ಲಿ ಕಂಚಿನ ಪದಕ ಜಯಿಸಿದ್ದರು.

ಶ್ರೇಷ್ಠ ಸಾಧನೆ:  ಹಾಕಿ ಹೊರತುಪಡಿಸಿ ಇಷ್ಟು ವರ್ಷಗಳ ಒಲಿಂಪಿಕ್ಸ್‌ನ ವೈಯಕ್ತಿಕ ವಿಭಾಗದಲ್ಲಿ ಭಾರತ ಗೆದ್ದಿದ್ದು ಒಟ್ಟು ಏಳು ಪದಕ. ಆದರೆ ಈ ಬಾರಿ ಒಂದೇ ಒಲಿಂಪಿಕ್ಸ್‌ನಲ್ಲಿ ಆರು ಪದಕ ಲಭಿಸಿದೆ (2 ಬೆಳ್ಳಿ, 4 ಕಂಚು). ಹಾಗಾಗಿ ಇದೊಂದು ಶ್ರೇಷ್ಠ ಸಾಧನೆ. ನಾಲ್ಕು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಮೂರು ಪದಕ (1 ಚಿನ್ನ, 2 ಕಂಚು) ಗೆದ್ದಿದ್ದೇ ಇದುವರೆಗಿನ ಶ್ರೇಷ್ಠ ಸಾಧನೆ ಆಗಿತ್ತು. ಅದನ್ನು ಈ ಬಾರಿ ಮೆಟ್ಟಿ ನಿಂತರು.

ಲಂಡನ್‌ಗೆ ವಿದಾಯ: 16 ದಿನಗಳ ಕಾಲ ಕ್ರೀಡಾ ಪ್ರೇಮಿಗಳ ಮನಸ್ಸು ಹಾಗೂ ಹೃದಯವನ್ನು ತನ್ನತ್ತ ಸೆಳೆದಿಟ್ಟುಕೊಂಡಿದ್ದ ಲಂಡನ್ ಒಲಿಂಪಿಕ್ಸ್‌ಗೆ ಭಾನುವಾರ ಮಧ್ಯರಾತ್ರಿ ತೆರೆ ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT