ADVERTISEMENT

ಸ್ಪೀಕರ್‌ ಮೀರಾ ವಿರುದ್ಧ ಅವಿಶ್ವಾಸ

ಪ್ರತಿಪಕ್ಷ ಬಿಜೆಪಿ ಪ್ರಮುಖರ ಚಿಂತನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಲೋಕಸಭಾಧ್ಯಕ್ಷೆ ಮೀರಾ ಕುಮಾರ್‌ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಎಲ್‌.ಕೆ. ಆಡ್ವಾಣಿ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಬಯಸಿದ್ದಾರೆ.

ಲೋಕಸಭೆಯಲ್ಲಿ 2ಜಿ ತರಂಗಾಂತರ ಹಂಚಿಕೆ ಹಗ­ರಣಕ್ಕೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿ ಬಗ್ಗೆ ಸೋಮವಾರ ಚರ್ಚೆಗೆ ಅವಕಾಶ ನೀಡ­ದಿರುವುದು ಪ್ರತಿಪಕ್ಷ ನಾಯಕರ ಸಿಟ್ಟಿಗೆ ಕಾರಣವಾಗಿದೆ.

ಇತ್ತೀಚೆಗೆ ನಿಧನರಾದ ವರ್ಣಭೇದ ನೀತಿ ವಿರೋಧಿ ನಾಯಕ ನೆಲ್ಸನ್‌ ಮಂಡೇಲಾ ಸ್ಮರಣೆಯ ಕಾರ್ಯಕ್ರಮ­ದಲ್ಲಿ ಭಾಗವಹಿಸಲು ತೆರಳಿರುವ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ಬಳಿಕ ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ. ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರೊಂದಿಗೆ ಜೋಹಾನ್ಸ್ ಬರ್ಗ್‌ಗೆ ತೆರಳಿರುವ ಸುಷ್ಮಾ ಬುಧವಾರ ಹಿಂದಿರುಗಲಿದ್ದಾರೆ.

ಪ್ರಮುಖ ಪ್ರತಿಪಕ್ಷ ಬಿಜೆಪಿ ನೀಡಿರುವ ಹಲವು ಅಸಮ್ಮತಿಯ ಟಿಪ್ಪಣಿಗಳನ್ನು 2ಜಿ ತರಂಗಾಂತರ ಹಗರಣ ವರದಿಯಲ್ಲಿ ಸಮಿತಿಯ ಅಧ್ಯಕ್ಷ ಚಾಕೊ ತಿದ್ದುಪಡಿ ಮಾಡಿರುವುದನ್ನು ಬಿಜೆಪಿಯ ರಾಜ್ಯಸಭಾ ಉಪನಾಯಕ ರವಿಶಂಕರ್‌ ಪ್ರಸಾದ್‌ ಟೀಕಿಸಿದ್ದಾರೆ. ಜೆಪಿಸಿ ವರದಿಯನ್ನು ಮಂಡಿಸಿದಾಗ ಈ ಬಗೆಗಿನ ಅಸಮಾಧಾನ ವ್ಯಕ್ತಪಡಿಸಲು ಸಂಸತ್ತಿನ ಎರಡೂ ಸದನಗಳಲ್ಲಿ ಅವಕಾಶ ನೀಡದಿರುವುದು ವಿಷಾದನೀಯ ಎಂದು ರವಿಶಂಕರ್‌ ಪ್ರಸಾದ್ ಹೇಳಿದ್ದಾರೆ.

ಮೇಲ್ಮನೆಯಲ್ಲಿ ಗದ್ದಲ: ರಾಜ್ಯಸಭೆಯಲ್ಲಿಯೂ ಬಿಜೆಪಿ ಸದಸ್ಯರು ಮಂಗಳವಾರ ಈ ವಿಷಯಕ್ಕೆ ಸಂಬಂಧಿಸಿ ಗದ್ದಲ ಸೃಷ್ಟಿಸಿದರು.
ಕಾಂಗ್ರೆಸ್‌ ಸದಸ್ಯ ಆನಂದ ಭಾಸ್ಕರ್‌   ಅವರು ವರದಿ ಮಂಡಿಸಿದಾಗ ವರದಿ ಬಗ್ಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್‌ ಸದಸ್ಯರು ವಿವಾದಾತ್ಮಕ ವರದಿ ಮಂಡಿಸುವುದನ್ನು ವಿರೋಧಿಸಿದರು. ಆದರೆ, ಸಮಿತಿ ಅಂಗೀಕರಿಸಿರುವ ವರದಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸುವುದಕ್ಕೆ ಜೆಪಿಸಿ ನಿಯಮಾವಳಿಯಲ್ಲಿ ಅವಕಾಶ ಇಲ್ಲ ಎಂದು ರಾಜ್ಯಸಭೆ ಉಪಸಭಾಪತಿ ಪಿ.ಜೆ. ಕುರಿಯನ್‌ ನಿರ್ಣಯ ನೀಡಿದರು.

ಜೆಪಿಸಿ ಸದಸ್ಯರೂ ಆಗಿದ್ದ ರವಿಶಂಕರ್‌ ಪ್ರಸಾದ್‌, ತಮ್ಮ ಅಸಮ್ಮತಿಯ ಟಿಪ್ಪಣಿ  ಬದಲಾಯಿಸಲಾಗಿದೆ. ಹೀಗಿರುವಾಗ ಚರ್ಚೆಗೆ ಯಾಕೆ ಅವಕಾಶ ಇಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಪಾಠ ಕಲಿತಿಲ್ಲ
ರಾಜ್ಯಸಭೆ ಪ್ರತಿಪಕ್ಷ ನಾಯಕ ಅರುಣ್‌ ಜೇಟ್ಲಿ ಕೂಡ ಕಾಂಗ್ರೆಸ್‌ ಮತ್ತು ಯುಪಿಎ ಸರ್ಕಾರದ ವಿರುದ್ಧ ಹರಿ­ಹಾಯ್ದಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ­ದಿಂದ ಕಾಂಗ್ರೆಸ್‌ ಪಾಠ ಕಲಿತಿಲ್ಲ ಎಂಬುದನ್ನು ಅದರ ನಡವಳಿಕೆ ತೋರಿ­ಸುತ್ತಿದೆ ಎಂದು ಜೇಟ್ಲಿ ಹೇಳಿದ್ದಾರೆ.

ಸ್ಪೀಕರ್‌ ಸಮರ್ಥನೆ
ಸ್ಪೀಕರ್‌ ಕಚೇರಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದೆ. ವಿಷಯ ಪ್ರಸ್ತಾಪಿಸಲು ಅವಕಾಶ ನೀಡದಿರುವ ಕ್ರಮವನ್ನು ಸಮರ್ಥಿಸುವ  ಹೇಳಿಕೆಯನ್ನು ಸ್ಪೀಕರ್‌ ಕಚೇರಿ ನೀಡಿದೆ. ‘ವರದಿ ಮಂಡನೆಯಾಗುವ ಮೊದಲೇ ಚರ್ಚೆ ಅಥವಾ ಆಕ್ಷೇಪ ವ್ಯಕ್ತಪಡಿಸಲು ಯಾವುದೇ ನಿಯಮ­ದಲ್ಲಿ ಅವಕಾಶ ಇಲ್ಲ. ಜಂಟಿ ಸಂಸದೀಯ ಸಮಿತಿ ನಿಯಮಾನುಸಾರ ಸಮಿತಿಯ ಅಧ್ಯಕ್ಷರು ಸದನದಲ್ಲಿ ವರದಿ ಮಂಡಿಸು­ವುದು ಕಡ್ಡಾಯ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸದನದಲ್ಲಿ ಮಂಡನೆಯಾಗುವ ತನಕ ವರದಿ ಚರ್ಚೆಗೆ ಲಭ್ಯವಾಗುವುದಿಲ್ಲ. ಹೀಗಾಗಿ ಸದನದಲ್ಲಿ ಮಂಡನೆಯಾಗದ ವರದಿ ಬಗ್ಗೆ ಚರ್ಚೆ ಸಾಧ್ಯವಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ. ಸ್ಪೀಕರ್‌ ನಿರ್ಧಾರ ಪ್ರಶ್ನಿಸದಿರುವುದು ಸಂಸದೀಯ ಶಿಷ್ಟಾಚಾರವಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT