ADVERTISEMENT

ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧದಿಂದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ

ಐಎಎನ್ಎಸ್
Published 6 ಜೂನ್ 2017, 12:03 IST
Last Updated 6 ಜೂನ್ 2017, 12:03 IST
ಅರವಿಂದ್ ಸುಬ್ರಮಣಿಯನ್ (ಸಾಂದರ್ಭಿಕ ಚಿತ್ರ)
ಅರವಿಂದ್ ಸುಬ್ರಮಣಿಯನ್ (ಸಾಂದರ್ಭಿಕ ಚಿತ್ರ)   

ನವದೆಹಲಿ: ಜಾನುವಾರುಗಳ ಮಾರಾಟದ ಮೇಲೆ ನಿರ್ಬಂಧ ವಿಧಿಸಿರುವುದು ಜಾನುವಾರು ಉದ್ಯಮದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ್ ಸುಬ್ರಮಣಿಯನ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯ ಕೃಷಿ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿಯ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹೈನುಗಾರಿಕೆ ಮತ್ತು ಜಾನುವಾರು ಉದ್ಯಮ ಎರಡೂ ಪ್ರಮುಖವಾದವು. ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆ. ಹಾಗೆಂದು, ನಿಯಮ ರೂಪಿಸುವಾಗ ಅದರಿಂದಾಗಬಹುದಾದ ಆರ್ಥಿಕ ಪರಿಣಾಮಗಳ ಬಗ್ಗೆ ಅದು ಎಚ್ಚರದಿಂದಿರಬೇಕಾಗುತ್ತದೆ’ ಎಂದು ಹೇಳಿದ್ದಾರೆ.

‘ಜಾನುವಾರು ಉದ್ಯಮದ ಆರ್ಥಿಕತೆ ಬಗ್ಗೆಯೂ ಸರ್ಕಾರ ಗಮನಹರಿಸಬೇಕು. ಸಾಮಾಜಿಕ ನಿಯಮಗಳಿಂದಾಗಿ ತೊಂದರೆಯಾದರೆ ಜಾನುವಾರು ಉದ್ಯಮ ಲಾಭದಾಯಕವಲ್ಲದೇ ಹೋದೀತು’ ಎಂದು ಸುಬ್ರಮಣಿಯನ್ ಹೇಳಿದ್ದಾರೆ.

ADVERTISEMENT

ಜಾನುವಾರು ಮಾರಾಟಕ್ಕೆ ಸಂಬಂಧಿಸಿದ ಹೊಸ ನಿಯಮದ ಪರಿಣಾಮದ ಬಗ್ಗೆ ಸರ್ಕಾರ ಗಮನಹರಿಸುತ್ತಿದೆ ಎಂದು ಪರಿಸರ ಸಚಿವ ಹರ್ಷವರ್ಧನ್ ಇತ್ತೀಚೆಗೆ ಹೇಳಿದ್ದರು. ಅದರ ಬೆನ್ನಲ್ಲೇ ಸುಬ್ರಮಣಿಯನ್ ಈ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಹತ್ಯೆಗಾಗಿ ಜಾನುವಾರು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಕಳೆದ ತಿಂಗಳು ಹೊಸ ನಿಯಮ ಪ್ರಕಟಿಸಿತ್ತು. ಇದಕ್ಕೆ ದೇಶದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.