ಡೆಹ್ರಾಡೂನ್: ಉತ್ತರಾಖಂಡದ ಗೌರಿಕುಂಡ ಬಳಿ ಮಂಗಳವಾರ ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದ ವಾಯುಪಡೆಯ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಅದರಲ್ಲಿದ್ದ ಎಲ್ಲ 20 ಮಂದಿ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ. ಈ ಪೈಕಿ 8 ಶವಗಳನ್ನು ಗುರುತಿಸಲಾಗಿದೆ. ಇವರಲ್ಲಿ ಐವರು ಹೆಲಿಕಾಪ್ಟರ್ ಸಿಬ್ಬಂದಿ ಹಾಗೂ ಮೂವರು ನಾಗರಿಕರು. ಹೆಲಿಕಾಪ್ಟರ್‌ನಲ್ಲಿದ್ದ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲವೆನ್ನಲಾಗಿದೆ.
ಕೇದಾರನಾಥದಲ್ಲಿ ಬುಧವಾರ ನಡೆಸಲು ಉದ್ದೇಶಿಸಿರುವ ಸಾಮೂಹಿಕ ಅಂತ್ಯಸಂಸ್ಕಾರಕ್ಕಾಗಿ ಗೌಚಾರ್‌ದಿಂದ ಹೊರಟು ಕಟ್ಟಿಗೆಗಳನ್ನು ಇಳಿಸಿ ಬರುತ್ತಿದ್ದಾಗ ಗೌರಿಕುಂಡದ ಉತ್ತರ ಭಾಗದ ಪ್ರದೇಶದಲ್ಲಿ ಈ ಅವಘಡ ಸಂಭವಿಸಿತು. ರಷ್ಯಾ ನಿರ್ಮಿತ ದೊಡ್ಡ ಗಾತ್ರದ `ಎಂಐ 17 ವಿ5' ಮಾದರಿಯ ಈ ಹೆಲಿಕಾಪ್ಟರನ್ನು ತೀವ್ರ ಕ್ಲಿಷ್ಟಕರ ಭೂಪ್ರದೇಶವಾದ ಕೇದಾರನಾಥದಲ್ಲಿ ಇದೇ ಮೊದಲ ಬಾರಿಗೆ ಇಳಿಸಲು ವಾಯುಪಡೆ ಯಶಸ್ವಿಯಾಗಿತ್ತು. ಅಲ್ಲಿಂದ ಹೊರಟ ಕೆಲವೇ ಹೊತ್ತಿನಲ್ಲಿ ಅದು ದುರಂತಕ್ಕೀಡಾಯಿತು.
ಕೆಲ ದಿನಗಳ ಹಿಂದೆಯೂ ಇದೇ ಪ್ರದೇಶದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಖಾಸಗಿ ಹೆಲಿಕಾಪ್ಟರ್ ದುರಂತಕ್ಕೀಡಾಗಿತ್ತು. ಆದರೆ ಪೈಲಟ್ ಪಾರಾಗಿದ್ದರು.
ಪ್ರತಿಕೂಲ ಹವಾಮಾನ ಕಾರಣ?: ಕೇದಾರನಾಥದಿಂದ ವಾಪಸಾಗುತ್ತಿದ್ದ ವಾಯುಪಡೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಲು ಪ್ರತಿಕೂಲ ಹವಾಮಾನವೇ ಕಾರಣ ಎನ್ನಲಾಗಿದೆ. ಅವಘಡ ಕುರಿತು ತನಿಖೆಗೆ ಐಎಎಫ್ ಆದೇಶಿಸಿದೆ. ಈ ದುರಂತದಿಂದ ಹಿನ್ನಡೆಯಾಗಿದ್ದರೂ, ಹೆಲಿಕಾಪ್ಟರ್ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಐಎಎಫ್ ತಿಳಿಸಿದೆ.
ಜೂನ್ 17ರಿಂದ ಇಲ್ಲಿಯವರೆಗೆ `ಐಎಎಫ್'ನ 45 ಹೆಲಿಕಾಪ್ಟರ್‌ಗಳು 1,300ಕ್ಕೂ ಹೆಚ್ಚು ಬಾರಿ ಸಂಚರಿಸಿ ಸಾವಿರಾರು ಜನರನ್ನು ರಕ್ಷಿಸಿವೆ. ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ಎನ್ ಎ ಕೆ ಬ್ರೌನ್ ಅವರು ಹೇಳಿಕೆ ನೀಡಿ, `ನಮ್ಮ ಹೆಲಿಕಾಪ್ಟರ್‌ಗಳು ಕಟ್ಟಕಡೆಯ ವ್ಯಕ್ತಿಯನ್ನು ರಕ್ಷಿಸುವವರೆಗೂ ಎಡೆಬಿಡದೆ ಸಂಚರಿಸಲಿವೆ. ಅತಂತ್ರ ಸ್ಥಿತಿಯಲ್ಲಿರುವ ಯಾರೂ ಅಧೀರರಾಗಬಾರದು' ಎಂದಿದ್ದಾರೆ.
ಮೇಘಸ್ಫೋಟ, ಭೂಕುಸಿತ: ಪರ್ವತ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು ಮತ್ತೆ ಕೆಲವೆಡೆ ಹೊಸದಾಗಿ ಭೂಕುಸಿತ ಸಂಭವಿಸಿದೆ. ಇದರ ಜತೆಗೆ ದೇವಪ್ರಯಾಗ ಸೇರಿದಂತೆ ಕೆಲವೆಡೆ ಮೇಘಸ್ಫೋಟವಾಗಿದೆ.
ರುದ್ರಪ್ರಯಾಗದ ಅಗಸ್ತ್ಯಮುನಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಮಧ್ಯಾಹ್ನದ ತನಕ ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಗೆ ಇಳಿಯಲು ಸಾಧ್ಯವಾಗಲಿಲ್ಲ. ಮಧ್ಯಾಹ್ನದ ನಂತರ ವಾತಾವರಣ ಸ್ವಲ್ಪ ಸುಧಾರಿಸಿದಾಗ ನಾಲ್ಕು ಹೆಲಿಕಾಪ್ಟರ್‌ಗಳು ಮಾತ್ರ ಕಾರ್ಯಾಚರಣೆ ನಡೆಸಿ ಬದರಿನಾಥದಲ್ಲಿ ಸಿಲುಕಿರುವವರ ಪೈಕಿ 60 ಜನರನ್ನು ರಕ್ಷಿಸಿದವು. ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲಿ ಹವಾಮಾನ ದಿಢೀರ್ ಬದಲಾಗುತ್ತಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ಇದು ಹೆಲಿಕಾಪ್ಟರ್ ಪೈಲಟ್‌ಗಳಿಗೆ ದೊಡ್ಡ ತೊಡಕಾಗಿದೆ.
ತೆಹ್ರಿ ಜಿಲ್ಲೆಯಲ್ಲಿ ಭೂಕುಸಿತವಾಗಿದ್ದರಿಂದ ಜೋಶಿಮಠದಿಂದ ಕಾರ್ಯಾಚರಣೆಗೆ ಇಳಿಯಬೇಕಿದ್ದ ಯಾವುದೇ ಹೆಲಿಕಾಪ್ಟರ್‌ಗಳು ಮೇಲಕ್ಕೇರಲು ಸಾಧ್ಯವಾಗಲಿಲ್ಲ. ಡೆಹ್ರಾಡೂನ್‌ನಲ್ಲಿ ಕೂಡ ಮೋಡ ದಟ್ಟೈಸಿ, ಮಂಜು ಕವಿದ ವಾತಾವರಣ ಇದ್ದಿದ್ದರಿಂದ ಸಹಸ್ರಧಾರಾ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್‌ಗಳು ಮೇಲೇಳಲಿಲ್ಲ. ಜಾಲಿ ಗ್ರ್ಯಾಂಟ್ ವಿಮಾನ ನಿಲ್ದಾಣದಿಂದಲೂ ಯಾವುದೇ ವೈಮಾನಿಕ ರಕ್ಷಣಾ ವಾಹನ ಮೇಲೇರಲಿಲ್ಲ.
ಈಗಾಗಲೇ ದುರಂತ ಸಂಭವಿಸಿ 10 ದಿನಗಳಾದ್ದರಿಂದ ಕೇದಾರನಾಥ ದೇವಾಲಯದ ಸುತ್ತಮುತ್ತ ಕೊಳೆತ ಶವಗಳ ವಾಸನೆ ಅಡರಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಇನ್ನೂ 8,000 ಜನ ಅತಂತ್ರರು
ಬದರಿನಾಥ ಸುತ್ತಮುತ್ತ ಇನ್ನೂ 8,000 ಜನ ಅತಂತ್ರರಾಗಿ ಸಿಲುಕಿದ್ದಾರೆ. ತೀವ್ರ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರುವ ಕಾರ್ಯಕ್ಕೆ ಅಡಚಣೆಯಾಗಿದೆ.
ಪ್ರಳಯಸ್ವರೂಪಿ ಪ್ರವಾಹ ಪೀಡಿತ ಭಾಗದಲ್ಲಿ ಹೊಸದಾಗಿ 142 ಶವಗಳು ಪತ್ತೆಯಾಗುವುದರೊಂದಿಗೆ ದುರಂತದಿಂದ ಮೃತರಾದವರ ಸಂಖ್ಯೆ 822ಕ್ಕೆ ಏರಿದೆ. ಈ ಪೈಕಿ ಅತ್ಯಂತ ಹೆಚ್ಚು ಸಾವುನೋವು ಕಂಡ ಕೇದಾರನಾಥವೊಂದರಲ್ಲೇ 127 ಶವಗಳು ಸಿಕ್ಕಿವೆ.
ಪತಿ ಶವ ಬಳಿ 2 ದಿನ ಕಣ್ಣೀರು!
ಡೆಹ್ರಾಡೂನ್: ಪವಿತ್ರ ಕ್ಷೇತ್ರಗಳ ಯಾತ್ರೆಯು ತಮ್ಮ ಕುಟುಂಬಕ್ಕೆ ಇನ್ನಷ್ಟು ಶ್ರೇಯಸ್ಸು ತರಲಿದೆ ಅಂದುಕೊಂಡಿದ್ದರು ಉಜ್ಜಯನಿಯ ರುಕ್ಮಾದೇವಿ. ಆದರೆ ಆಗಿದ್ದೇ ಬೇರೆ. ಕೇದಾರನಾಥದಲ್ಲಿ ಭೋರ್ಗರೆದ ಪ್ರವಾಹ ಹೊತ್ತು ತಂದ ಭಗ್ನಾವಶೇಷಗಳಡಿ ಸಿಲುಕಿ ಸಾವಿಗೀಡಾದ ಗಂಡನ ಶವದ ಬಳಿ ಅಸಹಾಯಕಳಾಗಿ ಕಣ್ಣೀರ‌್ಗರೆಯುತ್ತಾ ಆಕೆ ಎರಡು ದಿನಗಳನ್ನು ಕಳೆಯಬೇಕಾಯಿತು!
ಆಕೆಯ ಕುಟುಂಬದಲ್ಲಿ ಈಗ ಉಳಿದಿರುವುದು ರುಕ್ಮಾ ದೇವಿ (46) ಒಬ್ಬರೇ. ಅವಶೇಷಗಳಡಿಯಲ್ಲಿ ಗಂಡನ ಶವದ ಬಳಿ ರೋದಿಸುತ್ತಿದ್ದ ಅವರನ್ನು ರಕ್ಷಿಸಿ ಭಾನುವಾರ ಸಂಜೆ ಋಷಿಕೇಶಕ್ಕೆ ಕರೆತಂದು ಬಿಡಲಾಗಿದೆ. ಆದರೆ ಅನೂಹ್ಯ ದುರಂತವನ್ನು ಕಣ್ಣಾರೆ ಕಂಡ ಅವರು ತಾನಾದರೂ ಏಕೆ ಬದುಕಬೇಕಿತ್ತು ಎಂದು ಈಶ್ವರನ ಮೊರೆ ಹೋಗಿದ್ದಾರೆ.
ಪ್ರವಾಹದಲ್ಲಿ ತನ್ನ ಪತಿ ನಾಗೇಶ್ವರ್ ಸೇರಿದಂತೆ ಕುಟಂಬದ ನಾಲ್ವರನ್ನು ರುಕ್ಮಾಬಾಯಿ ಕ್ಷಣಾರ್ಧದಲ್ಲಿ ಕಳೆದುಕೊಂಡಿದ್ದಾರೆ. `ಇಡೀ ಪ್ರದೇಶವನ್ನು ನೀರು ಆವರಿಸುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಜೀವ ಉಳಿಸಿಕೊಳ್ಳಲು ಓಡತೊಡಗಿದರು. ನನ್ನ ಕುಟುಂಬ ಸದಸ್ಯರು ಕಣ್ಣೆದುರೇ ಕೊಚ್ಚಿಕೊಂಡು ಹೋಗಿದ್ದನ್ನು ನೋಡಿದೆ.
ಪ್ರವಾಹ ನಮ್ಮ ಮೇಲೆ ಹರಿಯಲು ಮೊದಲಾಗುತ್ತಿದ್ದಂತೆ ನಾನು ಮತ್ತು ನನ್ನ ಗಂಡ ಅದು ಹೊತ್ತ ತಂದ ಅವಶೇಷದಡಿ ಸಿಲುಕಿದೆವು. ಪತಿ ಉಸಿರಾಡಲು ಕಷ್ಟಪಡುತ್ತಿದ್ದುದನ್ನು ಅಳುತ್ತಾ, ಅಸಹಾಯಕಳಾಗಿ ನೋಡುತ್ತಿದ್ದೆ. ಸುಮಾರು ಅರ್ಧ ಗಂಟೆ ಕಾಲದ ನಂತರ ಅವರು ಕೊನೆಯುಸಿರೆಳೆದರು' ಎಂದು ಆ ಹೃದಯ ವಿದ್ರಾವಕ ಕ್ಷಣಗಳನ್ನು ನೆನೆದರು.
ಗಾಂಧಿ ಸರೋವರ, ಕೇದಾರನಾಥಗಳಲ್ಲಿ ಕೆಲವೇ ನಿಮಿಷಗಳೊಳಗೆ ಹೇಗೆ ನೀರು ಏರುತ್ತಾ ಹೋಯಿತೆಂಬ ಮೈ ಜುಮ್ಮೆನ್ನುಸುವ ಗಳಿಗೆಗಳನ್ನು ಅವರು ನೆನಪಿಸಿಕೊಂಡರು. `ಭಾವ, ನಾದಿನಿ, ಸೋದರ ಬಂಧುಗಳು ಭಾರಿ ಕೆಸರ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದನ್ನೂ ಕಣ್ಣಾರೆ ಕಂಡೆ. ಇಂತಹ ದುರಾದೃಷ್ಟ ನೋಡಲು ನಾನಾದರೂ ಏಕೆ ಬದುಕಬೇಕಿತ್ತು' ಎಂದೂ ಅವರು ಕೇಳುತ್ತಾರೆ.
ಮಧ್ಯಪ್ರದೇಶದಿಂದ ಹೊರಟಿದ್ದ 110 ಯಾತ್ರಾರ್ಥಿಗಳ ತಂಡದಲ್ಲಿ ರುಕ್ಮಾದೇವಿ ಅವರೂ ಒಬ್ಬರಾಗಿದ್ದರು. ಇವರಲ್ಲಿ 42 ಜನ ಒಂದು ವಾರದಿಂದ ನಾಪತ್ತೆಯಾಗಿದ್ದು ಅವರೆಲ್ಲಾ ಸಾವಿಗೀಡಾಗಿದ್ದಾರೆಂದೇ ಭಾವಿಸಲಾಗಿದೆ.
ಮುನ್ನೆಚ್ಚರಿಕೆಗೆ ಕೇಂದ್ರದ ತಂಡ ರವಾನೆ
ಈಗ ಸಾಂಕ್ರಾಮಿಕ ರೋಗ ಭೀತಿ...
ನವದೆಹಲಿ: ಕೇದಾರನಾಥ ಕ್ಷೇತ್ರದ ಸುತ್ತಮುತ್ತ ಶವಗಳು ಇನ್ನೂ ಬಿದ್ದಿದ್ದು, ಅವುಗಳ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಸತತ ಸುರಿಯುತ್ತಿರುವ ಮಳೆ ಅಡ್ಡಿಯಾಗಿ ಪರಿಣಮಿಸಿದೆ. ಈ ಮಧ್ಯೆ ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಭೀತಿ ಕೂಡ ಎದುರಾಗಿದೆ.
ಈವರೆಗೆ ಯಾವುದೇ ಸಾಂಕ್ರಾಮಿಕ ರೋಗ ವ್ಯಾಪಿಸಿದ ವರದಿಯಾಗಿಲ್ಲ; ಹಾಗಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದಾಗಿ ಕೈಗೊಳ್ಳಲಾದ ಆರೋಗ್ಯ ಸಂಬಂಧಿ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಲು ಕೇಂದ್ರದ ಉನ್ನತ ಮಟ್ಟದ ನಿಯೋಗ ಬುಧವಾರ ಇಲ್ಲಿಂದ ಡೆಹ್ರಾಡೂನಿಗೆ ತೆರಳಲಿದೆ.
ಹರಿದ್ವಾರದ ಅಳ್ವಾಲಪುರ, ಉತ್ತರಖಾಶಿಯ ಉದ್ವಿ ಹಾಗೂ ರುದ್ರಪ್ರಯಾಗದ ಚಂದ್ರಪುರಿಯಲ್ಲಿ ಅತಿಸಾರ ಪ್ರಕರಣಗಳು ವರದಿಯಾಗಿವೆ. ತಕ್ಷಣವೇ ಜಿಲ್ಲಾ ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ರೋಗ ವ್ಯಾಪಿಸದಂತೆ ಕ್ರಮ ಜರುಗಿಸಿದ್ದಾರೆ.
ಸಾರ್ವಜನಿಕ ಆರೋಗ್ಯಾಧಿಕಾರಿಗಳ ಮೂರು ತಂಡಗಳನ್ನು ಕೇಂದ್ರದಿಂದ ಉತ್ತರಾಖಂಡಕ್ಕೆ ಭಾನುವಾರ ಕಳಿಸಲಾಗಿದೆ. ಇನ್ನೂ ಎಂಟು ತಂಡಗಳಿಗೆ ಸಿದ್ಧವಾಗಿರುವಂತೆ ಸೂಚಿಸಲಾಗಿದ್ದು, ಯಾವುದೇ ಕ್ಷಣದಲ್ಲೂ ರವಾನಿಸಲಾಗುವುದು.
ನೋವು ಹಾಗೂ ಹತಾಶೆಯಿಂದ ಬಳಲುತ್ತಿರುವ ಸಂತ್ರಸ್ತರಲ್ಲಿ ಧೈರ್ಯ ತುಂಬಲು ಬೆಂಗಳೂರಿನ ನಿಮ್ಹಾನ್ಸ್‌ನಿಂದ ಮೂರು ತಂಡ ಕಳಿಸಲಾಗಿದೆ. ಜೋಶಿಮಠದಲ್ಲಿ ನೆರವಿಗೆ ಕಾಯುತ್ತ ಕುಳಿತಿರುವ ಸಂತ್ರಸ್ತರಿಗೆ ಕೌನ್ಸೆಲಿಂಗ್ ಮಾಡಿ, ಸಾಂತ್ವನ ಹೇಳಲು ಇಬ್ಬರು ಮಾನಸಿಕ ತಜ್ಞರನ್ನು ಸೇನಾ ಆಸ್ಪತ್ರೆಯಿಂದ ಜೋಶಿ ಮಠಕ್ಕೆ ಕರೆಸಿಕೊಳ್ಳಲಾಗಿದೆ.
ಪರಿಹಾರ ಚುರುಕು: `ಸುಪ್ರೀಂ' ಸೂಚನೆ
ನವದೆಹಲಿ (ಪಿಟಿಐ): ಪ್ರವಾಹಕ್ಕೆ ಸಿಲುಕಿ ಅತಂತ್ರವಾಗಿರುವ ಜನರ ರಕ್ಷಣಾ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಉತ್ತರಾಖಂಡ ಹಾಗೂ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ.
ಸಂತ್ರಸ್ತರ ರಕ್ಷಣೆಗೆ ಕೈಗೊಳ್ಳಲಾದ ಎಲ್ಲ ಕ್ರಮಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋರ್ಟ್‌ಗೆ ಇದೇ ಸಂದರ್ಭದಲ್ಲಿ ವರದಿ ಸಲ್ಲಿಸಿದವು.
ವಕೀಲ ಅಜಯ್ ಬನ್ಸಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಹಾಗೂ ರಂಜನ್ ಗೊಗೊಯ್ ಅವರಿದ್ದ ಪೀಠ, ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಅರ್ಜಿದಾರರು ನೀಡಿದ ಸಲಹೆ ಪರಿಗಣಿಸುವಂತೆ ಸರ್ಕಾರಗಳಿಗೆ ಸೂಚಿಸಿ ಮುಂದಿನ ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿತು.
`ಸಂತ್ರಸ್ತರ ರಕ್ಷಣೆ, ಪುನರ್ವಸತಿಗೆ ಇನ್ನಷ್ಟು ಚುರುಕಾಗಿ ಕಾರ್ಯಾಚರಣೆ ನಡೆಸಿ' ಎಂದೂ ನ್ಯಾಯಮೂರ್ತಿಗಳು ಸರ್ಕಾರಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.