ADVERTISEMENT

ಹೇಮಂತ್ ಸೋರೆನ್ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 14:02 IST
Last Updated 13 ಜುಲೈ 2013, 14:02 IST

ರಾಂಚಿ (ಪಿಟಿಐ): ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸಮ್ಮಿಶ್ರ ಸರ್ಕಾರದ ನಾಯಕನಾಗಿ ಆಯ್ಕೆಗೊಂಡ ಜೆಎಂಎಂ ಮುಖಂಡ ಹೇಮಂತ್ ಸೋರೆನ್ ಅವರು ಶನಿವಾರ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯದಲ್ಲಿ ಸುಮಾರು ತಿಂಗಳಿಂದ ಜಾರಿಯಲ್ಲಿ ರಾಷ್ಟ್ರಪತಿ ಆಡಳಿತವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ಬೆಳಿಗ್ಗೆ ಹಿಂತೆಗೆದುಕೊಳ್ಳುತ್ತಿದ್ದಂತೆ ಜೆಎಂಎಂ ಮುಖ್ಯಸ್ಥ ಶಿಬು ಸೋರೆನ್ ಅವರ ಪುತ್ರ ಹೇಮಂತ್ (37) ಅವರಿಗೆ ರಾಜ್ಯಪಾಲ ಸೈಯದ್ ಅಹಮ್ಮದ್ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಹೇಮಂತ್ ಅವರ ಸಮ್ಮಿಶ್ರ ಸರ್ಕಾರದಲ್ಲಿ  ಶಾಸಕಾಂಗ ಪಕ್ಷದ ನಾಯಕರಾಗಿರುವ ಕಾಂಗ್ರೆಸ್‌ನ ರಾಜೇಂದ್ರ ಪ್ರಸಾದ್ ಸಿಂಗ್ ಮತ್ತು ಆರ್‌ಜೆಡಿಯ ಅನ್ನಪೂರ್ಣಾ ದೇವಿ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲರನ್ನು ಭೇಟಿ ಮಾಡಿದ ಸೋರೆನ್ ಅವರು ವಿಧಾನಸಭೆಯ 82 ಸದಸ್ಯರಲ್ಲಿ ತಮಗೆ 43 ಸದಸ್ಯರ ಬೆಂಬಲವಿದೆ ಎಂದು ಬೆಂಬಲಿತ ಸದಸ್ಯರ ಪಟ್ಟಿ ನೀಡಿದ್ದರು. ಸದನದಲ್ಲಿ ಬಹುಮತ ಸಾಬೀತುಪಡಿಸಿದ ನಂತರ ಹೇಮಂತ್ ಅವರು ಸಚಿವ ಸಂಪುಟ ವಿಸ್ತರಣೆಗೆ ಮುಂದಾಗುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.