ADVERTISEMENT

ಹೇಳಿಕೆ ವಾಪಸ್ ಪಡೆದ ನರೇಶ್ ಅಗರ್‌ವಾಲ್

ಪಿಟಿಐ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ನವದೆಹಲಿ: ನಟಿ ಜಯಾ ಬಚ್ಚನ್ ಅವರ ಕುರಿತ ತಮ್ಮ ಹೇಳಿಕೆಯನ್ನು ಸಂಸದ ನರೇಶ್ ಅಗರ್‌ವಾಲ್ ಮಂಗಳವಾರ ಹಿಂಪಡೆದಿದ್ದಾರೆ. ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದೂ ಅವರು ಆರೋಪಿಸಿದ್ದಾರೆ.

ತಮಗೆ ರಾಜ್ಯಸಭೆ ಟಿಕೆಟ್‌ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದ ಅಗರ್‌ವಾಲ್, ಸಮಾಜವಾದಿ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಸಿನಿಮಾಗಳಲ್ಲಿ ನೃತ್ಯ ಮಾಡುವ ಜಯಾ ಬಚ್ಚನ್‌ ಅವರಿಗೆ ಸಮಾಜವಾದಿ ಪಕ್ಷ ಟಿಕೆಟ್ ನೀಡಿದೆ ಎಂದು ಅವರು ಹೇಳಿಕೆ ನೀಡಿದ್ದರು. ಬಿಜೆಪಿಗೂ ಈ ಮಾತು ಮುಜುಗರ ತಂದಿತ್ತು.

‘ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಒಂದು ವೇಳೆ ನನ್ನ ಮಾತುಗಳು ಯಾರಿಗಾದರೂ ಘಾಸಿ ಮಾಡಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಮಾತುಗಳನ್ನು ಹಿಂದಕ್ಕೆ ಪಡೆಯುತ್ತೇನೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ನೋಟು ರದ್ದತಿ ಬಗ್ಗೆ ಪ್ರಶ್ನೆ ಕೇಳಿದ್ದ ನರೇಶ್:  ಬಿಜೆಪಿ ಸೇರುವ ಕೆಲ ದಿನಗಳ ಮುನ್ನ ಹಣಕಾಸು ಖಾತೆ ರಾಜ್ಯ ಸಚಿವರಿಗೆ ನರೇಶ್ ಅಗರ್‌ವಾಲ್ ಅವರು ಲಿಖಿತ ಪ್ರಶ್ನೆ ಕೇಳಿದ್ದರು. ‘ನೋಟು ರದ್ದತಿಯು ಸರ್ಕಾರ ಅತ್ಯಂತ ಕೆಟ್ಟ ನಿರ್ಧಾರ ಎಂಬುದನ್ನು ಒಪ್ಪಿಕೊಳ್ಳುತ್ತೀರಾ? ಇಲ್ಲವಾದರೆ ಈ ನಿರ್ಧಾರದಿಂದ ಯಾವ ಕ್ಷೇತ್ರಗಳು ಲಾಭ ಪಡೆದಿವೆ?’ ಎಂಬ ಎರಡು ಪ್ರಶ್ನೆ ಕೇಳಿದ್ದರು. ನರೇಶ್ ಅವರ ಪ್ರಶ್ನೆಗಳಿಗೆ ಸಚಿವ ಪಿ. ರಾಧಾಕೃಷ್ಣನ್ ಅವರು ಮಂಗಳವಾರ ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದರು. ‘ನೋಟು ರದ್ದತಿ ಕೆಟ್ಟ ನಿರ್ಧಾರ ಅಲ್ಲ’ ಎಂದು ಮೊದಲ ಪ್ರಶ್ನೆಗೆ ಉತ್ತರಿಸಿದರು. ‘ನಕಲಿ ನೋಟು ಹಾವಳಿ ತಡೆ, ಭಯೋತ್ಪಾದಕ ಚಟುವಟಿಕೆ ನಿಗ್ರಹ, ಕಪ್ಪುಹಣ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಾಗೂ ಆರ್ಥಿಕತೆಯ ಡಿಜಿಟಲೀಕರಣಕ್ಕೆ ಈ ನಿರ್ಧಾರದಿಂದ ನೆರವಾಗಿದೆ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಹೆಚ್ಚಿದ ಆಕ್ರೋಶ: ಜಯಾ ಬಚ್ಚನ್ ಬಗ್ಗೆ ಹೇಳಿಕೆ ನೀಡಿದ ನರೇಶ್ ಅಗರ್‌ವಾಲ್ ವಿರುದ್ಧ ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಹಾಗೂ ಬಿಜೆಪಿ ಸಂಸದೆ ರೂಪಾ ಗಂಗೂಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನರೇಶ್ ಸ್ಪಷ್ಟನೆ ನೀಡಿದ್ದರೂ ಬಿಜೆಪಿ ನಾಯಕರು ಸಮಾಧಾನಗೊಂಡಿಲ್ಲ.

‘ಹೇಳಿಕೆ ಕೆಟ್ಟದಾಗಿರುವುದಷ್ಟೇ ಅಲ್ಲ, ಅವರ ಮನಸ್ಥಿತಿಯನ್ನೂ ತಿಳಿಸುವಂತಿದೆ’ ಎಂದು ಆಹಾರ ಸಂಸ್ಕರಣೆ ಖಾತೆ ಸಚಿವೆ ಹರ್‌ಸಿಮ್ರತ್ ಕೌರ್ ಹೇಳಿದ್ದಾರೆ.

‘ಏನೇನು ಆಗಿದೆಯೋ ಅದೆಲ್ಲವೂ ತಪ್ಪು. ಮಹಿಳಾ ಕಲಾವಿದರೆಲ್ಲರಿಗೂ ಗೌರವ ನೀಡಬೇಕು. ಅಷ್ಟೇ ಏಕೆ ಉದ್ಯೋಗಸ್ಥ ಮಹಿಳೆಯರೆಲ್ಲರನ್ನೂ ಗೌರವಿಸಬೇಕು’ ಎಂದು ರೂಪಾ ಗಂಗೂಲಿ ಹೇಳಿದ್ದಾರೆ.

ನರೇಶ್ ಹೇಳಿಕೆ ಮಹಿಳಾ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.