ಮುಂಬೈ (ಪಿಟಿಐ): ಮಧುಚಂದ್ರದ ವೇಳೆ ಸಂಗಾತಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ನಿರಾಕರಿಸುವುದನ್ನು ‘ಕ್ರೌರ್ಯ’ ಎಂದು ಪರಿಗಣಿಸಲು ಆಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಹೆಂಡತಿ ಅಪರೂಪಕ್ಕೊಮ್ಮೆ ಪ್ಯಾಂಟ್ ಮತ್ತು ಶರ್ಟ್ ಧರಿಸಿ ಕಚೇರಿಗೆ ಹೋಗುವುದು ಹಾಗೂ ಮದುವೆಯಾದ ಹೊಸದರಲ್ಲಿ ಕಚೇರಿ ಕೆಲಸದ ಮೇಲೆ ಪರಸ್ಥಳಕ್ಕೆ ತೆರಳುವ ಹೆಂಡತಿ ವರ್ತನೆಯನ್ನು ‘ಕ್ರೌರ್ಯ’ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಇದೇ ಕಾರಣಗಳಿಗಾಗಿ ದಂಪತಿಗೆ ಎರಡು ವರ್ಷಗಳ ಹಿಂದೆ ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿದೆ.
ಪತ್ನಿಯ ಕ್ರೂರ ವರ್ತನೆ ಆಧಾರದ ಮೇಲೆ ವಿಚ್ಛೇದನ ನೀಡುವಂತೆ ಕೋರಿ ಪತಿ ಸಲ್ಲಿಸಿದ್ದ ಅರ್ಜಿ ಮನ್ನಿಸಿದ ಕೌಟುಂಬಿಕ ನ್ಯಾಯಾಲಯ 2012ರಲ್ಲಿ ವಿಚ್ಛೇದನ ನೀಡಿತ್ತು. ಆದೇಶ ಪ್ರಶ್ನಿಸಿ 29 ವರ್ಷದ ಪತ್ನಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಪತ್ನಿಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕೆ. ತಾಹಿಲ್ ರಮಾನಿ ಮತ್ತು ಪಿ.ಎನ್. ದೇಶ್‌ಮುಖ್, ದಾಂಪತ್ಯದಲ್ಲಿ ಆಗಾಗ ನಡೆಯುವ ಇಂತಹ ಘಟನೆಗಳನ್ನು ಕ್ರೂರ ವರ್ತನೆಗಳು ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂತಹ ವರ್ತನೆ ಪದೇ ಪದೇ ಮರುಕಳಿಸಿದಲ್ಲಿ ಹಾಗೂ ಪತಿ ತನ್ನ ಸಂಗಾತಿ ಇಲ್ಲದೇ ಬದುಕಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದಾಗ ಮಾತ್ರ ಅಂಥ ಪ್ರಕರಣವನ್ನು ‘ಮಾನಸಿಕ ಕ್ರೌರ್ಯ’ ಎಂದು ಗಣನೆಗೆ ತೆಗೆದುಕೊಳ್ಳಲಾಗದು ಎಂದು ಪೀಠ ಹೇಳಿದೆ.
ಪ್ರತಿನಿತ್ಯ ಒಂದಿಲ್ಲ ಒಂದು ಕುಟುಂಬದಲ್ಲಿ ಜಗಳ, ಕಿತ್ತಾಟ ನಡೆಯುತ್ತಲೇ ಇರುತ್ತವೆ. ಆ ಘಟನೆಗಳ ಆಧಾರದ ಮೇಲೆ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಮಾನಸಿಕ ಅಥವಾ ದೈಹಿಕ ಹಿಂಸೆ, ದೌರ್ಜನ್ಯ ನಡೆದಲ್ಲಿ ಮಾತ್ರ ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬಹುದು. ಈ ಪ್ರಕರಣದಲ್ಲಿ ಅಂತಹ ಯಾವುದೇ ಕೃತ್ಯ ನಡೆದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಹಿನ್ನೆಲೆ: 2009ರಲ್ಲಿ ಮದುವೆಯಾದ ಈ ದಂಪತಿ ಮಧುಚಂದ್ರಕ್ಕಾಗಿ ಮಹಾಬಲೇಶ್ವರಕ್ಕೆ ತೆರಳಿದ್ದರು. ಋತುಸ್ರಾವದ ಕಾರಣ ಪತಿಯ ಆಹ್ವಾನವನ್ನು ಪತ್ನಿ ತಿರಸ್ಕರಿಸಿದ್ದಳು ಹಾಗೂ ಆತನೊಂದಿಗೆ ಸಹಕರಿಸಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ.
ಕೌಟುಂಬಿಕ ನ್ಯಾಯಾಲಯ ಆತನ ಮನವಿಯನ್ನು ಪುರಸ್ಕರಿಸಿತ್ತು. ಆದರೆ, ಬಾಂಬೆ ಹೈಕೋರ್ಟ್ ಪತಿಯ ಅರ್ಜಿಯನ್ನು ತಳ್ಳಿ ಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.