ನವದೆಹಲಿ (ಪಿಟಿಐ): ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರದ ಒಡೆತನದ ವಿಮಾನಯಾನ ಸಂಸ್ಥೆ ‘ಏರ್ ಇಂಡಿಯಾ’, ಜಾಗತಿಕ ವಿಮಾನಯಾನ ಒಕ್ಕೂಟವಾದ ‘ಸ್ಟಾರ್ ಅಲಯನ್ಸ್’ ಜತೆ ಮಂಗಳವಾರ ಮೈತ್ರಿ ಸಾಧಿಸಿದೆ.
ಜಾಗತಿಕ ಮಟ್ಟದ 26 ಪ್ರಮುಖ ವಿಮಾನಯಾನ ಸಂಸ್ಥೆಗಳ ಈ ದೊಡ್ಡ ಒಕ್ಕೂಟವನ್ನು ಸೇರಿಕೊಂಡು ಏರ್ ಇಂಡಿಯಾ ತನ್ನ ಸಾಮರ್ಥ್ಯವನ್ನು ವಿಸ್ತರಿಸಲು ಉತ್ತಮ ಅವಕಾಶ ದೊರಕಿದಂತಾಗಿದೆ.
ಕೊನೆಗೂ 7 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯವಾಗಿದ್ದು, ಲಂಡನ್ನಲ್ಲಿ ನಡೆದ ಸ್ಟಾರ್ ಅಲಯನ್ಸ್ನ ಮುಖ್ಯ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಲಾಯಿತು. ಇದರಿಂದ ಏರ್ ಇಂಡಿಯಾದ ಪ್ರಯಾಣಿಕರಿಗೆ 195 ದೇಶಗಳಲ್ಲಿನ 1,328 ವಿಮಾನ ನಿಲ್ದಾಣಗಳಲ್ಲಿ ಪ್ರತಿನಿತ್ಯ 21,980 ವಿಮಾನಯಾನ ಮಾರ್ಗಗಳ ವ್ಯಾಪಕ ಸೇವೆ ಪಡೆದುಕೊಳ್ಳುವ ಅವಕಾಶ ಲಭ್ಯವಾಗಲಿದೆ. ಈಗಿನ ಮೈತ್ರಿಯಿಂದಾಗಿ ಏರ್ ಇಂಡಿಯಾದ ವರಮಾನದಲ್ಲಿಯೂ ಶೇ 4ರಿಂದ 5ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಮುಖ್ಯವಾಗಿ ಭಾರತದಿಂದ ಅಮೆರಿಕದತ್ತ ಪ್ರಯಾಣಿಸಲು ಬಯಸುವ ಏರ್ ಇಂಡಿಯಾ ಗ್ರಾಹಕರಿಗೆ ವಿಮಾನ ಪ್ರಯಾಣ ಸೌಲಭ್ಯ ಹೆಚ್ಚಿದಂತಾಗಿದೆ.
ಸ್ಟಾರ್ ಅಲಯನ್ಸ್ನಲ್ಲಿ ಏರ್ ಇಂಡಿಯಾದ ಔಪಚಾರಿಕ ಸೇರ್ಪಡೆ ಸಮಾರಂಭ ಜುಲೈ 11ರಂದು ನಡೆಯಲಿದೆ. ಈ ವೇಳೆ ಅಂತರರಾಷ್ಟ್ರೀಯ, ರಾಷ್ಟ್ರೀಯ ವಿಮಾನಯಾನ ಆರಂಭ ಸೂಚಕವಾಗಿ ಸ್ಟಾರ್ ಅಲಯನ್ಸ್ ಚಿಹ್ನೆ, ಬಣ್ಣವಿರುವ ಬೋಯಿಂಗ್ 787 ಡ್ರೀಮ್ಲೈನರ್ ಮತ್ತು ಏರ್ಬಸ್ ಎ320 ಹಾರಾಟ ನಡೆಸಲಿವೆ.
ಏರ್ ಇಂಡಿಯಾ ಸ್ಟಾರ್ ಅಲಯನ್ಸ್ನ ಗ್ಲೋಬಲ್ ನೆಟ್ವರ್ಕ್ನಲ್ಲಿ ವಿಮಾನ ಹಾರಾಟದ ವೇಳಾಪಟ್ಟಿ ಮತ್ತು ಟಿಕೆಟ್ ಕಾಯ್ದಿರಿಸುವಿಕೆ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿದೆ.
ವಿಮಾನಯಾನ ಸೇವೆಗಳ ಈ ಬೃಹತ್ ಒಕ್ಕೂಟಸೇರಲು ಏರ್ ಇಂಡಿಯಾ ಸಂಸ್ಥೆಗೆ 2007ರಲ್ಲೇ ಒಪ್ಪಿಗೆ ದೊರೆತಿತ್ತಾದರೂ, ಕಾರಣಾಂತರಗಳಿಂದ 2011ರಲ್ಲಿ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿತ್ತು.
ಸ್ಟಾರ್ ಅಲಯನ್ಸ್ ವಿಶೇಷ
ಸ್ಟಾರ್ ಅಲಯನ್ಸ್ ಒಕ್ಕೂಟದ ಸದಸ್ಯ ಸಂಸ್ಥೆಗಳು ಒಟ್ಟು 4,338 ವಿಮಾನಗಳನ್ನು ಹೊಂದಿದ್ದು, ವರ್ಷದಲ್ಲಿ 64 ಕೋಟಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿವೆ. ಈಗ ಏರ್ ಇಂಡಿಯಾ ಸಹ ಒಕ್ಕೂಟಕ್ಕೆ ಪ್ರತಿದಿನ 400 ವಿಮಾನಗಳ ಹಾರಾಟದ ಸೇವೆಯನ್ನು ಸೇರಿಸಲಿದೆ.
ಜತೆಗೆ, ಹೊಸದಾಗಿ 35 ನಗರಗಳಿಗೆ ಸಂಪರ್ಕವನ್ನು ಒದಗಿಸಲಿದೆ. ಯುಎಸ್ ಕ್ಯಾರಿಯರ್ ಯುನೈಟೆಡ್, ಲುಫ್ತಾನ್ಸಾ, ಏರ್ ಚೀನಾ ಮೊದಲಾದ ದೊಡ್ಡ ವಿಮಾನಯಾನ ಸಂಸ್ಥೆಗಳು ಸ್ಟಾರ್ ಅಲಯನ್ಸ್ ಸದಸ್ಯತ್ವ ಹೊಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.