ADVERTISEMENT

ಉಗ್ರರ ಭೀತಿ: ಹುಟ್ಟೂರು ಬಿಟ್ಟ 10 ಕಾಶ್ಮೀರಿ ಪಂಡಿತರ ಕುಟುಂಬಗಳು

ಪಿಟಿಐ
Published 26 ಅಕ್ಟೋಬರ್ 2022, 4:24 IST
Last Updated 26 ಅಕ್ಟೋಬರ್ 2022, 4:24 IST
ಶ್ರೀನಗರ: ದೀಪಾವಳಿ ಪ್ರಯುಕ್ತ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಕಾಶ್ಮೀರಿ ಪಂಡಿತ್‌ | ಪಿಟಿಐ ಚಿತ್ರ
ಶ್ರೀನಗರ: ದೀಪಾವಳಿ ಪ್ರಯುಕ್ತ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಕಾಶ್ಮೀರಿ ಪಂಡಿತ್‌ | ಪಿಟಿಐ ಚಿತ್ರ   

ಜಮ್ಮು: ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಚೌಧರಿಗುಂಡ್‌ ಗ್ರಾಮದ 10 ಕಾಶ್ಮೀರಿ ಕುಟುಂಬಗಳು ಹುಟ್ಟೂರು ಬಿಟ್ಟು ಜಮ್ಮುವಿಗೆ ತೆರಳಿದ್ದಾರೆ. ಇತ್ತೀಚೆಗೆ ಕಾಶ್ಮೀರಿ ಪಂಡಿತರನ್ನು ಗುರಿಯಾಗಿ ಉಗ್ರರು ನಡೆಸುತ್ತಿರುವ ದಾಳಿಯಿಂದ ಕಂಗೆಟ್ಟು ಈ ನಿರ್ಧಾರ ಕೈಗೊಂಡಿದ್ದಾರೆ.

'1990ರ ಅವಧಿಯಲ್ಲಿ, ಭಯೋತ್ಪಾದಕ ಕೃತ್ಯಗಳು ಮಿತಿ ಮೀರಿದ್ದಂತಹ ಕಷ್ಟಕರ ಸಮಯದಲ್ಲೂ ಅಲ್ಲೇ ನೆಲೆಯೂರಿದ್ದ ಕಾಶ್ಮೀರಿ ಪಂಡಿತರ ಪೈಕಿ ಕೆಲವರಿಗೆ ಇತ್ತೀಚೆಗೆ ನಡೆದ ಉಗ್ರರ ದಾಳಿಯಿಂದ ಭಯ ಶುರುವಾಗಿದೆ' ಎಂದು ಚೌಧರಿಗುಂಡ್‌ ಗ್ರಾಮದ ನಿವಾಸಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ಅಕ್ಟೋಬರ್‌ 15ರಂದು ಚೌಧರಿಗುಂಡ್‌ ಗ್ರಾಮದಲ್ಲಿ ಕಾಶ್ಮೀರಿ ಪಂಡಿತ್‌ ಪುರಾನ್‌ ಕೃಷ್ಣನ್‌ ಭಟ್‌ ಅವರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅಕ್ಟೋಬರ್‌ 18ರಂದು ಕಾಶ್ಮೀರಿ ಪಂಡಿತರಾದ ಮೋನಿಶ್‌ ಕುಮಾರ್‌ ಮತ್ತು ರಾಮ್‌ ಸಾಗರ್‌ ಅವರ ಹತ್ಯೆ ನಡೆದಿತ್ತು. ಉಗ್ರರು ಅವರ ಮನೆಯ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದರು.

ADVERTISEMENT

'35-40 ಸದಸ್ಯರಿರುವ 10 ಕಾಶ್ಮೀರಿ ಪಂಡಿತ್‌ ಕುಟುಂಬಗಳು ನಮ್ಮ ಗ್ರಾಮವನ್ನು ತೊರೆದಿದ್ದಾರೆ. ಇತ್ತೀಚೆಗೆ ನಡೆದ ಉಗ್ರರ ದಾಳಿಯಿಂದ ಭಯಪಟ್ಟಿದ್ದರು. ಈಗ ಗ್ರಾಮವೇ ಖಾಲಿಯಾಗಿದೆ' ಎಂದು ಉಗ್ರರಿಂದ ಕೊಲೆ ಬೆದರಿಕೆ ಎದುರಿಸುತ್ತಿರುವ ಚೌಧರಿಗುಂಡ್‌ ಗ್ರಾಮದ ನಿವಾಸಿ ತಿಳಿಸಿದ್ದಾರೆ.

'ಕಾಶ್ಮೀರ ಕಣಿವೆಯಲ್ಲಿ ನಾವು ಬದುಕಿ ಉಳಿಯುವ ಪರಿಸ್ಥಿತಿಯಲ್ಲಿ ಇಲ್ಲ. ಪ್ರತಿದಿನ ಜೀವಭಯದಿಂದ ಬದುಕು ಸಾಗಿಸುತ್ತಿದ್ದೇವೆ. ನಮಗೆ ಭದ್ರತೆ ಇಲ್ಲ' ಎಂದು ಗ್ರಾಮದ ಮತ್ತೊಬ್ಬ ಸದಸ್ಯ ಅಳಲನ್ನು ತೋಡಿಕೊಂಡಿದ್ದಾರೆ.

ರಕ್ಷಣೆ ನೀಡುವಂತೆ ನಿರಂತರವಾಗಿ ಮನವಿ ಮಾಡಿದರೂ ಪೊಲೀಸ್‌ ಪಡೆಯನ್ನು ಗ್ರಾಮದಿಂದ ದೂರದಲ್ಲಿ ನಿಯೋಜಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮನೆಯಲ್ಲಿ ಇದ್ದುದ್ದೆಲ್ಲವನ್ನೂ ಬಿಟ್ಟು ಬಂದಿರುವುದಾಗಿ ಜಮ್ಮುವಿಗೆ ವಲಸೆ ಬಂದಿರುವ ಕಾಶ್ಮೀರಿ ಪಂಡಿತರು ಹೇಳಿದ್ದಾರೆ. ಕಟಾವು ಮಾಡಿದ್ದ ಸೇಬನ್ನು ಬಿಟ್ಟುಬಂದಿರುವುದಾಗಿ ತಿಳಿಸಿದ್ದಾರೆ. ಸದ್ಯ ಎಲ್ಲರೂ ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.