ADVERTISEMENT

16ರಂದು ಪೆಟ್ರೋಲ್‌ ಬಂಕ್‌ ಬಂದ್‌

ಪಿಟಿಐ
Published 10 ಜೂನ್ 2017, 19:30 IST
Last Updated 10 ಜೂನ್ 2017, 19:30 IST
16ರಂದು ಪೆಟ್ರೋಲ್‌ ಬಂಕ್‌ ಬಂದ್‌
16ರಂದು ಪೆಟ್ರೋಲ್‌ ಬಂಕ್‌ ಬಂದ್‌   

ದಾವಣಗೆರೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲಬೆಲೆಗೆ ಅನುಗುಣವಾಗಿ ನಿತ್ಯವೂ ಬೆಲೆ ಪರಿಷ್ಕರಣೆ ಮಾಡುವ ಯೋಜನೆ ವಿರೋಧಿಸಿ ಜೂನ್‌ 16ರಂದು ರಾಜ್ಯದಾದ್ಯಂತ ಪೆಟ್ರೋಲ್‌ ಬಂಕ್‌ ಬಂದ್‌ ಮಾಡಲು ರಾಜ್ಯ ಪೆಟ್ರೋಲಿಯಂ ಡೀಲರ್ಸ್‌ ಫೆಡರೇಷನ್‌ ನಿರ್ಧರಿಸಿದೆ.

ಶನಿವಾರ ನಗರದಲ್ಲಿ ಫೆಡರೇಷನ್‌ ಅಧ್ಯಕ್ಷ ಎಚ್‌.ಮಂಜಪ್ಪ ನೇತೃತ್ವದಲ್ಲಿ ನಡೆದ ತೈಲ ವರ್ತಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಜೂನ್‌ 15ರ ಮಧ್ಯರಾತ್ರಿಯಿಂದ 16ರ ಮಧ್ಯರಾತ್ರಿವರೆಗೆ ಒಂದು ದಿನ ಸಾಂಕೇತಿಕ ಮುಷ್ಕರ ನಡೆಸಲು ತೀರ್ಮಾನಿಸಲಾಯಿತು.

ADVERTISEMENT

ಸಭೆಯ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ ಮಂಜಪ್ಪ, ‘ಜೂನ್‌ 16ರ ನಂತರ ದೇಶದಾದ್ಯಂತ ನಿತ್ಯ ತೈಲ ಬೆಲೆ ಪರಿಷ್ಕರಣೆ ಮಾಡುವ ಯೋಜನೆ ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದರಿಂದ ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ತೊಂದರೆಯಾಗಲಿದೆ. ನಿತ್ಯವೂ ಮಧ್ಯರಾತ್ರಿ 12ಕ್ಕೆ ಮಾಲೀಕರೇ ಬಂಕ್‌ಗೆ ಬಂದು ಪರಿಷ್ಕೃತ ದರ ನಮೂದಿಸಬೇಕು. ಸ್ವಲ್ಪ ಹೆಚ್ಚುಕಡಿಮೆಯಾದರೆ ₹ 5 ಲಕ್ಷ ದಂಡ ತೆರಬೇಕು. ಇದೊಂದು ಅವೈಜ್ಞಾನಿಕ ನಿರ್ಧಾರ’ ಎಂದು ಟೀಕಿಸಿದರು.

‘ರಾತ್ರಿ 8ಕ್ಕೆ ಮೊಬೈಲ್‌ ಅಥವಾ ವೆಬ್‌ಸೈಟ್‌ನಲ್ಲಿ ಪರಿಷ್ಕೃತ ದರ ಪ್ರಕಟಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಮೊಬೈಲ್‌, ಇಂಟರ್‌ನೆಟ್‌ ಸೇವೆ ಇಲ್ಲದ ಗ್ರಾಮೀಣ ಪ್ರದೇಶಗಳಿಗೆ ನಿತ್ಯವೂ ದರ ಹೇಗೆ ತಲುಪುತ್ತದೆ. ಬೆಲೆ ಹೆಚ್ಚುಕಡಿಮೆಯಾಗುತ್ತಿದ್ದರೆ ಗ್ರಾಹಕರು ಗೊಂದಲಕ್ಕೆ ಸಿಲುಕಲಿದ್ದಾರೆ’ ಎಂದು ಅವರು ಹೇಳಿದರು.

ಜೂನ್‌ 14ರಂದು ನವದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರನ್ನು ಭೇಟಿ ಮಾಡಿ ಯೋಜನೆ ಕೈಬಿಡುವಂತೆ ಮನವಿ ಮಾಡಲಾಗುವುದು. ನಮ್ಮ ಮನವಿಗೆ ಸಚಿವರು ಸ್ಪಂದಿಸಿದರೆ ಬಂದ್‌ ನಿರ್ಧಾರ ಹಿಂತೆಗೆದುಕೊಳ್ಳಲಾಗುವುದು ಎಂದು ಮಂಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.