ADVERTISEMENT

2ಜಿ ಹಗರಣ: ಸಿದ್ದಾರ್ಥ ಬೆಹುರಾಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 9 ಮೇ 2012, 11:10 IST
Last Updated 9 ಮೇ 2012, 11:10 IST
2ಜಿ ಹಗರಣ: ಸಿದ್ದಾರ್ಥ ಬೆಹುರಾಗೆ ಜಾಮೀನು
2ಜಿ ಹಗರಣ: ಸಿದ್ದಾರ್ಥ ಬೆಹುರಾಗೆ ಜಾಮೀನು   

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಗರಣದಲ್ಲಿ ಆರೋಪಿಗಳಲ್ಲಿ ಒಬ್ಬರಾದ ದೂರಸಂಪರ್ಕ ಇಲಾಖೆ ಮಾಜಿ ಕಾರ್ಯದರ್ಶಿ ಸಿದ್ದಾರ್ಥ ಬೆಹುರಾಗೆ ಬುಧವಾರ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ ಮತ್ತೊಬ್ಬ ಆರೋಪಿಯಾದ ಆರ್.ಕೆ. ಚಂಡೋಲಿಯಾ ಅವರಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ ಜಾಮೀನು ಎತ್ತಿಹಿಡಿದಿದೆ.

ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಹಾಗೂ ಕೆ.ಎಸ್.ರಾಧಾಕೃಷ್ಣನ್ ಅವರನ್ನು ಒಳಗೊಂಡ ಪೀಠವು ಮಾಜಿ ದೂರಸಂಪರ್ಕ ಸಚಿವ ಎ. ರಾಜಾ ಅವರ ಮಾಜಿ ಆಪ್ತ ಕಾರ್ಯದರ್ಶಿ ಆರ್.ಕೆ. ಚಂಡೋಲಿಯಾ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿದ ಜಾಮೀನು ಎತ್ತಿಹಿಡಿದು ಅದಕ್ಕೆ ಸ್ವಯಂ ಪ್ರೇರಿತವಾಗಿ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಆದೇಶದ ವಿಚಾರಣೆಯನ್ನು ಮತ್ತೊಂದೆಡೆ ನಿಗದಿಪಡಿಸಿದೆ.

ಬೆಹುರಾ ಅವರಿಗೆ 10 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಹಾಗೂ ಐದು ಲಕ್ಷ ರೂಪಾಯಿ ಭದ್ರತಾ ಠೇವಣಿ ನೀಡುವಂತೆ ಹೇಳಿರುವ ಪೀಠವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ರಾಜಾ ಅವರೊಂದಿಗೆ ಬೆಹುರಾ ಹಾಗೂ ಚಂಡೋಲಿಯಾ ಅವರನ್ನು  ಸಿಬಿಐ ಅಧಿಕಾರಿಗಳು ಕಳೆದ ವರ್ಷದ ಫೆಬ್ರುವರಿಯಲ್ಲಿ ಬಂಧಿಸಿದ್ದರು.

ವಿಚಾರಣಾ ನ್ಯಾಯಾಲಯ ಚಂಡೋಲಿಯಾ ಅವರಿಗೆ ಜಾಮೀನು ನೀಡುತ್ತಿದ್ದಂತೆ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿತ್ತು. ಅದನ್ನು ಪ್ರಶ್ನಿಸಿ ಚಂಡೋಲಿಯಾ ಅವರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.

ಇದರೊಂದಿಗೆ 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಎಲ್ಲ ಆರೋಪಿಗಳಲ್ಲಿ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಹೊರತುಪಡಿಸಿ ಎಲ್ಲರಿಗೂ ಜಾಮೀನು ದೊರೆತಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.