ADVERTISEMENT

2 ಜಿ ತರಂಗಾಂತರ ಹಗರಣ: ಸಿಬಲ್ ಸಮರ್ಥನೆ- ಶೌರಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST


ಮುಂಬೈ (ಪಿಟಿಐ): 2 ಜಿ ತರಂಗಾಂತರ ಹಗರಣ ಕುರಿತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ವರದಿಯನ್ನು ಕಟುವಾಗಿ ಖಂಡಿಸಿರುವ ಮಾಜಿ ದೂರ ಸಂಪರ್ಕ ಸಚಿವ ಅರುಣ್ ಶೌರಿ, ಮಾಜಿ ಸಚಿವ ಎ.ರಾಜಾ ಅವರನ್ನು ಶತಾಯಗತಾಯ ಸಂರಕ್ಷಿಸಲು ಹಾಲಿ ಸಚಿವ ಕಪಿಲ್ ಸಿಬಲ್ ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಶಿವರಾಜ್ ಪಾಟೀಲ್ ಅವರ ವರದಿಯಲ್ಲಿ ವಾಸ್ತವವನ್ನು ತಿರುಚಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ದೂರಿದರು.

ರಾಜಾ ಪರ ವಕಾಲತ್ತು ವಹಿಸಿರುವ ಸಿಬಲ್ ಸುಳ್ಳು ಹೇಳುತ್ತಿದ್ದಾರೆ. ರಾಜಾ ಅವರು 2008ರಲ್ಲಿ ತರಂಗಾಂತರ ಹಂಚಿಕೆ ಪಟ್ಟಿಯನ್ನು ಬದಲಾಯಿಸುವ ಜತೆಗೆ ಕೆಲವು ನಿರ್ದಿಷ್ಟ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಅರ್ಜಿ ಸಲ್ಲಿಕೆ ದಿನಾಂಕವನ್ನು ಹಿಂದೂಡಿಕೆ ಮಾಡಿದ್ದರು ಎಂದು ಶೌರಿ ವಿವರಿಸಿದರು.
ಸಿಎಜಿಯಿಂದ ಮರೆ ಮಾಚಿರುವ ದಾಖಲೆಗಳು ತಮ್ಮ ಬಳಿ ಇವೆ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ADVERTISEMENT

‘ತರಂಗಾಂತರ ಹಂಚಿಕೆ ವೇಳೆ ಟ್ರಾಯ್ ಶಿಫಾರಸುಗಳನ್ನು ಬಿಜೆಪಿ ನಿರ್ಲಕ್ಷಿಸಿತ್ತು ಎಂದು ಪಾಟೀಲ್ ತಮ್ಮ ವರದಿಯಲ್ಲಿ ಹೇಳಿದ್ದಾರೆ. ಆದರೆ ಟ್ರಾಯ್‌ನ ಪ್ರತಿಯೊಂದು ಶಿಫಾರಸನ್ನು ಪರಿಗಣಿಸಿ ಅದಕ್ಕನುಗುಣವಾಗಿಯೇ ನಾವು ನಡೆದುಕೊಂಡಿದ್ದೇವೆ. ಹಣಕಾಸು ಇಲಾಖೆ ಸದಸ್ಯರ ಸಮ್ಮುಖದಲ್ಲಿ, ಅವರ  ಲಿಖಿತ ಒಪ್ಪಿಗೆ ನಂತರವೇ ನಾವು ಪ್ರತಿ ಹೆಜ್ಜೆಯನ್ನೂ ಇರಿಸಿದ್ದೆವು ’ ಎಂದು ಸಮರ್ಥಿಸಿಕೊಂಡರು.

ಸಿಬಲ್ ಅರ್ಧಸತ್ಯ ಮಾತ್ರ ಹೇಳುತ್ತಿದ್ದಾರೆ. ಪ್ರತಿಯೊಂದು ಸುದ್ದಿಗೋಷ್ಠಿಯಲ್ಲೂ ರಾಜಾ ಅವರನ್ನು ಸಮರ್ಥಿಸಿಕೊಂಡು ಪ್ರಧಾನಿಯವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಸಿಬಲ್ ಹೇಳುವುದನ್ನು ಒಪ್ಪಿದ್ದೇ ಆದಲ್ಲಿ, ಈ ಕುರಿತು ಕಳೆದ ಆರೂವರೆ ವರ್ಷ ಕಾಲ ಮನಮೋಹನ್ ಸಿಂಗ್ ಏನು ಮಾಡುತ್ತಿದ್ದರು?- ಎಂದು ಕೇಳಬೇಕಾಗುತ್ತದೆ ಎಂದರು.

‘ಮೊದಲು ಬಂದವರಿಗೆ ಆದ್ಯತೆ’ ಎಂಬ ನಿಯಮಾವಳಿ ಬದಲಾಯಿಸಿದ್ದ ಬಗ್ಗೆ ರಾಜ ಏನನ್ನೂ ಬಹಿರಂಗಪಡಿಸಿಲ್ಲ.  ಕೇವಲ 41 ನಿಮಿಷಗಳೊಳಗೆ 1650 ಕೋಟಿ ರೂಪಾಯಿಯ ಬ್ಯಾಂಕ್ ಡಿ.ಡಿ. ಸಲ್ಲಿಸಲು ಸೂಚಿಸಿದ್ದರ ಬಗ್ಗೆಯೂ ಅವರು ಬಾಯಿಬಿಟ್ಟಿಲ್ಲ’ ಎಂದರು.

‘ಶಿವರಾಜ್ ಪಾಟೀಲರು ನೀಡಿರುವಂತಹ ವರದಿಗಳಿಂದ ನ್ಯಾಯಾಂಗದ ಘನತೆಗೆ ಚ್ಯುತಿ ಬರುತ್ತದೆ. ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದ್ದೂ ಈ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ.
2 ಜಿ ತರಂಗಾಂತರ ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಕಂಪೆನಿಗಳ ವಿಚಾರಣೆಯನ್ನೇ ನಡೆಸದೆ, ಸೂಕ್ತ ದಾಖಲೆಗಳನ್ನು ಪರಿಶೀಲಿಸದೇ ಪಾಟೀಲ್ ಅವರು ಈ ವರದಿ ಸಲ್ಲಿಸಿದ್ದಾರೆ’ ಎಂದು ಶೌರಿ ಟೀಕಾಸ್ತ್ರ ಪ್ರಯೋಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.