ADVERTISEMENT

344 ಔಷಧಗಳಿಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
344 ಔಷಧಗಳಿಗೆ ನಿಷೇಧ
344 ಔಷಧಗಳಿಗೆ ನಿಷೇಧ   

ನವದೆಹಲಿ (ಪಿಟಿಐ): ಕೆಮ್ಮಿನ ಔಷಧ, ಆ್ಯಂಟಿಬಯೊಟಿಕ್‌ಗಳು ಸೇರಿದಂತೆ ಸ್ಥಿರ ಮಿಶ್ರಣದ 344 ಔಷಧಗಳನ್ನು ಆರೋಗ್ಯ ಸಚಿವಾಲಯ ನಿಷೇಧಿಸಿದೆ. ಮಾ.10ರಿಂದಲೇ ನಿಷೇಧ ಜಾರಿಗೆ ಬಂದಿದ್ದು, ಇವು ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂಬುದು ನಿಷೇಧಕ್ಕೆ ಕಾರಣ. ಇವುಗಳಿಗೆ ಬದಲಿ ಔಷಧಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ ಎಂದು ಸಚಿವಾಲಯ ತಿಳಿಸಿದೆ.

‘ನಿಷೇಧಕ್ಕೆ ಒಳಗಾದ ಔಷಧಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ’ ಎಂದು ಕೆಲವು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂದಾಜು ₹ 40 ರಿಂದ 50 ಸಾವಿರ ಕೋಟಿ ಮೌಲ್ಯದ ನಿಷೇಧಿತ ಔಷಧಗಳು ಭಾರತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.

‘ನಿಷೇಧ ಹೇರುವ ಮುನ್ನ ಈ   ಔಷಧಗಳ ಪರಿಣಾಮ  ಅರಿಯಲು  ವಿಜ್ಞಾನಿಗಳ ನೆರವು ಪಡೆದಿದ್ದೇವೆ’ ಎಂದು ಸಮರ್ಥಿಸಿಕೊಂಡಿದೆ.
‘344ಕ್ಕೂ ಹೆಚ್ಚು ಔಷಧ ಕಂಪೆನಿಗಳಿಗೆ  ಷೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ’ ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೆಲವು ಕಂಪೆನಿಗಳು ಪ್ರತಿಕ್ರಿಯೆ ನೀಡಲು ಮುಂದಾಗುತ್ತಿಲ್ಲ. ಎಲ್ಲರಿಗೂ ಸಾಕಷ್ಟು ಸಮಯ ನೀಡಿದ್ದೇವೆ. ಇದಾದ  ನಂತರ ನಮ್ಮ ಕ್ರಮ ಕೈಗೊಂಡಿದ್ದೇವೆ. ಇದಕ್ಕೂ ಮೊದಲು ಎಲ್ಲ ಪರಿಶೀಲನೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.

ಸರ್ಕಾರ ಔಷಧದ ಮೇಲೆ ನಿಷೇಧ ಹೇರುತ್ತಿದ್ದಂತೆಯೇ ಕೆಲವು ಕಂಪೆನಿಗಳು ಔಷಧಗಳ ಉತ್ಪಾದನೆಗೆ ಕಡಿವಾಣ ಹಾಕಿವೆ. ಇಷ್ಟೊಂದು ಸಂಖ್ಯೆಯ ಔಷಧಗಳಿಗೆ ನಿಷೇಧ ಹೇರಿರುವ ಕಾರಣ ಔಷಧ ತಯಾರಿಕಾ ಕಂಪೆನಿಗಳು ಮತ್ತೊಮ್ಮೆ  ಕ್ಲಿನಿಕಲ್‌ ಟ್ರಯಲ್‌ ನಡೆಸಬೇಕಾಗುತ್ತದೆ.

ವರದಿಗೆ ಸೂಚನೆ
ದೇಶದಾದ್ಯಂತ 300ಕ್ಕೂ ಹೆಚ್ಚು ಔಷಧಗಳ ಮೇಲೆ ನಿಷೇಧ ಹೇರಿರುವ ಬಗ್ಗೆ ಸ್ಥಿತಿಗತಿ ವರದಿ ನೀಡುವಂತೆ ದೆಹಲಿ ಹೈಕೋರ್ಟ್‌ ಆರೋಗ್ಯ ಸಚಿವಾಲಯಕ್ಕೆ   ನೋಟಿಸ್‌ ಜಾರಿ ಮಾಡಿದೆ. ಸ್ಥಿತಿಗತಿ ವರದಿ ನೀಡುವ ಸಮಿತಿಯ ನೇತೃತ್ವವನ್ನು ಬೆಳಗಾವಿಯ ಕೆಎಲ್‌ಇ ವಿವಿಯ ಕುಲಪತಿ ಸಿ.ಕೆ. ಕೋಕಾಟೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT