ADVERTISEMENT

₹4 ಲಕ್ಷ ಕೋಟಿ ಸಾಲ ಎತ್ತಲು ಸಜ್ಜು

ಕೇಂದ್ರ ಬಜೆಟ್‌ ಭರವಸೆ ಈಡೇರಿಸಲು ಅನುದಾನದ ಕೊರತೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
₹4 ಲಕ್ಷ ಕೋಟಿ ಸಾಲ ಎತ್ತಲು ಸಜ್ಜು
₹4 ಲಕ್ಷ ಕೋಟಿ ಸಾಲ ಎತ್ತಲು ಸಜ್ಜು   

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಗೂ ಮುನ್ನವೇ ಪ್ರಸಕ್ತ ಬಜೆಟ್‌ ಭರವಸೆಗಳನ್ನು ಕಾರ್ಯರೂಪಕ್ಕೆ ತರುವ ಒತ್ತಡದಲ್ಲಿ ಕೇಂದ್ರ ಸರ್ಕಾರ ಸಿಲುಕಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ತಗಲುವ ಭಾರಿ ವೆಚ್ಚ ಭರಿಸಲು ಮಾರುಕಟ್ಟೆಯಿಂದ ದೊಡ್ಡ ಮೊತ್ತದ ಸಾಲ ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ಸರ್ಕಾರ ಈ ವರ್ಷ ಮಾರುಕಟ್ಟೆಯಿಂದ ₹4 ಲಕ್ಷ ಕೋಟಿ ಸಾಲ ತೆಗೆದುಕೊಳ್ಳಲು ಚಿಂತನೆ ನಡೆಸಿದೆ. ಮಾರುಕಟ್ಟೆಯಿಂದ ಸಾಲ ಪಡೆಯುವ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ.

ಮುಂಬರುವ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲೇ (ಏಪ್ರಿಲ್‌–ಸೆಪ್ಟೆಂಬರ್‌) ಸಾಲದ ಮೊತ್ತ ₹4 ಲಕ್ಷ ಕೋಟಿಯನ್ನು ಮೀರಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆ ಮತ್ತು ರೈತರ ಕೃಷಿ ಉತ್ಪನ್ನಗಳಿಗೆ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನೀಡುವ ಯೋಜನೆಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟಿಲ್ಲ.

ವಿಶ್ವದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಕಾರ್ಯಕ್ರಮ ಎಂದು ಹೇಳಲಾದ ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಯನ್ನು ಆಗಸ್ಟ್ 15 ಅಥವಾ ಅಕ್ಟೋಬರ್‌ 2ರಿಂದ ಜಾರಿಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ.

ಸರ್ಕಾರದ ಈ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳ ಅನುಷ್ಠಾನಕ್ಕೆ ಭಾರಿ ಮೊತ್ತ ಅಗತ್ಯವಿದೆ. ಯೋಜನೆ ಜಾರಿಗೆ ಅಗತ್ಯವಾದ ಹಣಕಾಸಿನ ಕೊರತೆ ಎದುರಾದ ಕಾರಣ ಸರ್ಕಾರಕ್ಕೆ ಸಾಲ ಪಡೆಯುವ ಅನಿವಾರ್ಯ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ವರಮಾನ ತಗ್ಗಿದಾಗ ವೆಚ್ಚಕ್ಕಾಗಿ ಸರ್ಕಾರ ಮಾರುಕಟ್ಟೆಯಿಂದ ಸಾಲ ಎತ್ತಬಹುದು. ಅಂತಿಮವಾಗಿ ಇದು ಆರ್ಥಿಕ ಕೊರತೆಗೆ ಕಾರಣವಾಗುತ್ತದೆ. ಅಲ್ಲದೆ, ಅನೇಕ ವರ್ಷಗಳ ಕಾಲ ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಹಿಂದಿನ ಸಾಲದ ಮೇಲಿನ ಬಡ್ಡಿಯನ್ನು ಸೇರಿಸಿ ಮಾರುಕಟ್ಟೆಯಿಂದ ಒಟ್ಟು ₹6.06 ಕೋಟಿ ಸಾಲ ಪಡೆಯುುವುದಾಗಿ ಸರ್ಕಾರ 2018–19ರ ಬಜೆಟ್‌ನಲ್ಲಿ ಹೇಳಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ನಿರೀಕ್ಷಿತ ವರಮಾನ ಬಾರದಿದ್ದಾಗ ಸರ್ಕಾರ 2017–18ರಲ್ಲಿಯೂ ಮಾರುಕಟ್ಟೆಯಿಂದ ಸಾಲ ಪಡೆದಿತ್ತು.

ಹಿಂದಿನ ಸಾಲ ಮತ್ತು ಬಡ್ಡಿಯ ಹೊರೆಯನ್ನು ಸರಿದೂಗಿಸಲು ಡಿಸೆಂಬರ್‌ನಲ್ಲಿ ಸರ್ಕಾರ ₹50,000 ಕೋಟಿ ಹೆಚ್ಚುವರಿ ಸಾಲ ಪಡೆದಿತ್ತು. 2012ರಿಂದ ಸರ್ಕಾರ, ಮಾರುಕಟ್ಟೆಯಿಂದ ಇಷ್ಟು ದೊಡ್ಡ ಮೊತ್ತದ ಸಾಲ ಪಡೆದಿರಲಿಲ್ಲ.

ಒಂದು ವರ್ಷಕ್ಕೂ ಕಡಿಮೆ ಅವಧಿಯ ಸಾಲಪತ್ರ ಮತ್ತು ಖಜಾನೆ ಪತ್ರಗಳನ್ನು ವಿತರಿಸುವ ಮೂಲಕ ಸರ್ಕಾರ ಮಾರುಕಟ್ಟೆಯಿಂದ ಬಂಡವಾಳ ಅಥವಾ ನಿಧಿಯನ್ನು
ಸಂಗ್ರಹಿಸುತ್ತದೆ.

**

*   ಸಾಲ ಪಡೆಯುವ ಪ್ರಕ್ರಿಯೆಗೆ ಕಳೆದ ವಾರವೇ ಚಾಲನೆ

*   ಸರ್ಕಾರಿ ಸಾಲಪತ್ರಗಳನ್ನು ನೇರವಾಗಿ ಖರೀದಿಸುವ ಸಂಸ್ಥೆಗಳೊಂದಿಗೆ ಚರ್ಚಿಸಿದ ಹಣಕಾಸು ಸಚಿವಾಲಯದ ಅಧಿಕಾರಿಗಳು

*   ಶನಿವಾರ ನಡೆದ ನಗದು ಮತ್ತು ಸಾಲ ನಿರ್ವಹಣೆ ಉಸ್ತುವಾರಿ ತಂಡದ ಸಭೆಯಲ್ಲೂ ಚರ್ಚೆ

*   ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು

*   ಸರ್ಕಾರಿ ಬಾಂಡ್‌ಗಳ ಮಾರುಕಟ್ಟೆ ಉತ್ತೇಜನ ಕುರಿತು ಚರ್ಚೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.