ADVERTISEMENT

‘ಎಂಟು ತಿಂಗಳಲ್ಲಿ 41 ಲಕ್ಷ ಉದ್ಯೋಗ’

ಮಾಹಿತಿ ನೀಡಿದ ಸಚಿವ ಡಿ.ವಿ.ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:12 IST
Last Updated 3 ಜುಲೈ 2018, 20:12 IST

ನವದೆಹಲಿ: ಕಳೆದ ಸೆಪ್ಟೆಂಬರ್‌ನಿಂದ ಏಪ್ರಿಲ್‌ವರೆಗಿನ ಎಂಟು ತಿಂಗಳ ಅವಧಿಯಲ್ಲಿ ದೇಶದಾದ್ಯಂತ 41.26 ಲಕ್ಷ ಯುವಜನತೆಗೆ ಉದ್ಯೋಗಾವಕಾಶ ದೊರೆತಿದೆ ಎಂದು ಕೇಂದ್ರದ ಅಂಕಿಸಂಖ್ಯೆ ಹಾಗೂ ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು.

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌), ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌) ಯೋಜನೆಗಳ ನೋಂದಣಿ ಸಂಖ್ಯೆ ಆಧರಿಸಿ ಹೊಸ ಉದ್ಯೋಗಿಗಳ ಮಾಹಿತಿ ಕಲೆ ಹಾಕಲಾಗಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಳೆದ 4 ವರ್ಷಗಳ ಅವಧಿಯಲ್ಲಿ ಸೃಷ್ಟಿಯಾಗಿರುವ ಉದ್ಯೋಗಾವಕಾಶದ ಪ್ರಮಾಣ ಎಷ್ಟು’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯು ಕಳೆದ ಸೆಪ್ಟೆಂಬರ್‌ನಿಂದಲೇ ಉದ್ಯೋಗಾವಕಾಶ ಕುರಿತ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದರಿಂದ, ಇಷ್ಟು ಮಾಹಿತಿ ಮಾತ್ರ ಲಭ್ಯವಿದೆ. ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ 4 ವರ್ಷಗಳ ಅವಧಿಯಲ್ಲಿ ಇದುವರೆಗೆ ಎಷ್ಟು ಜನ ಯುವಕ, ಯುವತಿಯರಿಗೆ ಉದ್ಯೋಗ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಡಿಸೆಂಬರ್‌ ವೇಳೆಗೆ ಕಲೆ ಹಾಕಿ ಪ್ರಕಟಿಸಲಾಗುವುದು ಎಂದು ಹೇಳಿದರು.

ADVERTISEMENT

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಅತ್ಯಂತ ಹಿಂದುಳಿದಿದ್ದ ಈಶಾನ್ಯ ರಾಜ್ಯಗಳು ಕಳೆದ 70 ವರ್ಷಗಳಲ್ಲಿ ಅವಧಿಯಲ್ಲಿಯೇ ಅತ್ಯುತ್ತಮ ಮಾದರಿಯಲ್ಲಿ ಅಭಿವೃದ್ಧಿ ಹೊಂದಿವೆ ಎಂದು ಅವರು ವಿವರಿಸಿದರು.

ಉತ್ತಮ ಆಡಳಿತಕ್ಕೆ ಒತ್ತು ನೀಡಿರುವ ಸರ್ಕಾರ, ಆಡಳಿತದಲ್ಲಿ ಪಾರದರ್ಶಕತೆಗೆ ತರಲು ಯತ್ನಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವದ್ಧಿಯ ಕನಸು ಸಾಕಾರವಾಗುತ್ತಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.