ADVERTISEMENT

49 ಗಣಿ ಗುತ್ತಿಗೆ ಪರವಾನಿಗೆ ರದ್ದು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 10:18 IST
Last Updated 18 ಏಪ್ರಿಲ್ 2013, 10:18 IST

ನವದೆಹಲಿ (ಪಿಟಿಐ): ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸ್ಸಿನ ಮೇರೆಗೆ ಸುಪ್ರೀಂ ಕೋರ್ಟ್ ಗುರುವಾರ  ರಾಜ್ಯದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ 49 ಗಣಿಗಾರಿಕೆ ಕಂಪೆನಿಗಳ ಗುತ್ತಿಗೆ ಪರವಾನಿಗೆಯನ್ನು ರದ್ದುಗೊಳಿಸಿದೆ.

ಇದೇ ಸಂದರ್ಭದಲ್ಲಿ ಸಿಇಸಿ ಶಿಫಾರಸು ಮೇರೆಗೆ ಸುಪ್ರೀಂ ಕೋರ್ಟ್  ಹೆಚ್ಚು ನಿಯಮ ಉಲ್ಲಂಘನೆ  ಮಾಡದ ಕೆಲ ಗಣಿಗಾರಿಕೆ ಕಂಪೆನಿಗಳ ಮುಂದುವರೆಯುವಿಕೆಗೆ ಅವಕಾಶವನ್ನು ನೀಡಿದೆ.

ನ್ಯಾಯಾಮೂರ್ತಿ ಅಫ್ತಾಬ್ ಆಲಂ, ಕೆ.ಎಸ್. ರಾಧಾಕೃಷ್ಣನ್ ಮತ್ತು ರಂಜನ್ ಗೊಗೊಯಿ ಅವರನ್ನೊಳಗೊಂಡ ಪೀಠವು, ಸಮಾಜ ಪರಿವರ್ತನ ಸಮುದಾಯ ಸಂಸ್ಥೆ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿ, ಆದೇಶವನ್ನು ನೀಡಿದೆ.

ಈ ಜಿಲ್ಲೆಗಳಲ್ಲಿನ ಗಣಿಗಾರಿಕೆಯನ್ನು ಸಿಇಸಿಯು ಎ, ಬಿ ಮತ್ತು ಸಿ  ಎಂದು ವರ್ಗಿಕರಿಸಿತ್ತು. ಈ ಮೂರು ವರ್ಗಗಳಲ್ಲಿ ಕಡಿಮೆ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿದ ಗಣಿಗಾರಿಕೆಗಳನ್ನು ಎ ವರ್ಗದಲ್ಲಿ ಗುರುತಿಸಲಾಗಿ, ಹೆಚ್ಚು ಕಾನೂನು ಉಲ್ಲಂಘನೆ ಮಾಡಿದ ಗಣಿಗಾರಿಕೆಗಳನ್ನು ಸಿ ವರ್ಗ ಎಂದು ವರ್ಗಿಕರಿಸಲಾಗಿತ್ತು.

ಕರ್ನಾಟಕದಲ್ಲಿನ  ಗಣಿಗಾರಿಕೆಗೆ ಸಂಬಂಧಿಸಿದಂತೆ ಜು. 2011ರಿಂದ ಸಿಇಸಿಯ ಬಹುತೇಕ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿದೆ.  ಇದೇ ಸಂದರ್ಭದಲ್ಲಿ ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿನ  ಕೆಲ ಕಬ್ಬಿಣ ಅದಿರು ಗಣಿಗಾರಿಕೆ ಕಂಪೆನಿಗಳನ್ನು ಎರಡು  ರಾಜ್ಯದ ಗಡಿ ಭಾಗವನ್ನು ಗುರುತಿಸುವವರೆಗೆ ಅಮಾನತಿನಲ್ಲಿಟ್ಟಿದೆ.

ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕೆಲ ಖಾಸಗಿ ಗಣಿಗಾರಿಕೆ ಕಂಪೆನಿಗಳು ಹೆಚ್ಚು ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿ, ಗಣಿಗಾರಿಕೆಯನ್ನು ನಡೆಸುತ್ತಿವೆ ಎಂದು ಆರೋಪಿಸಿ ಸಮಾಜ ಪರಿವರ್ತನ ಸಮುದಾಯವು ಸುಪ್ರೀಂ ಕೋರ್ಟ್ ಗೆ ದೂರು ಸಲ್ಲಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.