ADVERTISEMENT

ಕುಲಭೂಷಣ್‌ ಜಾಧವ್‌ ಪ್ರಕರಣ: ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ ಪಾಕಿಸ್ತಾನ

ಪಿಟಿಐ
Published 4 ಜನವರಿ 2018, 11:50 IST
Last Updated 4 ಜನವರಿ 2018, 11:50 IST
ಕುಲಭೂಷಣ್‌ ಜಾಧವ್‌ ಪ್ರಕರಣ: ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ ಪಾಕಿಸ್ತಾನ
ಕುಲಭೂಷಣ್‌ ಜಾಧವ್‌ ಪ್ರಕರಣ: ಮತ್ತೊಂದು ವಿಡಿಯೊ ಬಿಡುಗಡೆ ಮಾಡಿದ ಪಾಕಿಸ್ತಾನ   

ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ಮತ್ತೊಂದು ವಿಡಿಯೊವನ್ನು ಪಾಕಿಸ್ತಾನ ಗುರುವಾರ ಬಿಡುಗಡೆ ಮಾಡಿದೆ.

ಕಳೆದ ಡಿಸೆಂಬರ್‌ 25ರಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ತಮ್ಮ ತಾಯಿ ಮತ್ತು ಪತ್ನಿಯನ್ನು ಜಾಧವ್‌ ಭೇಟಿ ಮಾಡಿದ್ದರು.

ಈ ವೇಳೆ ಅಧಿಕಾರಿಗಳು ಜಾಧವ್‌ ತಾಯಿ ಹಾಗೂ ಹೆಂಡತಿಯೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ದೂರಿದ್ದ ಭಾರತ, ಕುಟುಂಬದವರೊಂದಿಗಿನ ಸಂವಾದ ಸಂದರ್ಭದಲ್ಲಿ ಬಿಗಿ ಭದ್ರತೆ ನಿಯೋಜಿಸಿದ್ದರಿಂದ ಜಾಧವ್‌ ಒತ್ತಡಕ್ಕೊಳಗಾಗಿದ್ದರು ಎಂದೂ ಆರೋಪಿಸಿತ್ತು.

ADVERTISEMENT

ಒಟ್ಟು 40 ನಿಮಿಷಗಳ ಕಾಲ ತಾಯಿ ಹಾಗೂ ಹೆಂಡತಿ ಜತೆ ನಡೆಸಿದ್ದ ಮಾತುಕತೆಯನ್ನು ಚಿತ್ರೀಕರಿಸಲಾಗಿತ್ತು. ಪರಸ್ಪರ ಎದುರು ಬದುರು ಕುಳಿತಿದ್ದರೂ ಗಾಜಿನ ಗೋಡೆ ಅಡ್ಡ ಇದ್ದ ಕಾರಣ ಇಂಟರ್ಕಾಮ್ ಮೂಲಕ ಮಾತನಾಡಿದ್ದರು. ಇದು ಪಾಕಿಸ್ತಾನ ಪ್ರಕಟಿಸಿದ್ದ ವಿಡಿಯೊ ಹಾಗೂ ಚಿತ್ರಗಳಲ್ಲಿ ದಾಖಲಾಗಿತ್ತು.

ಸದ್ಯ ಬಿಡುಗಡೆಯಾಗಿರುವ ವಿಡಿಯೊವನ್ನು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ಖಚಿತಪಡಿಸಲಾಗಿದೆ.

ಈ ವಿಡಿಯೊದಲ್ಲಿ ಜಾಧವ್‌, ‘ತಾಯಿಯನ್ನು ಖುದ್ದಾಗಿ ಭೇಟಿಯಾಗಿದ್ದ ವೇಳೆ ಪಾಕಿಸ್ತಾನ ಅಧಿಕಾರಿಗಳು ನನಗೆ ಕಿರುಕುಳ ನೀಡುತ್ತಿಲ್ಲ. ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದೆ. ಆ ಮಾತನ್ನು ನನ್ನ ತಾಯಿ ನಂಬಿದ್ದರು’ ಎಂದು ಹೇಳಿಕೊಂಡಿದ್ದಾರೆ.

‘ನಾನು ಭಾರತದ ಸಾರ್ವಜನಿಕರಿಗೆ, ಭಾರತ ಸರ್ಕಾರ ಹಾಗೂ ನೌಕಾಪಡೆಯ ಅಧಿಕಾರಿಗಳಿಗೆ ಒಂದು ಮುಖ್ಯವಾದ ಸಂಗತಿಯನ್ನು ಸ್ಪಷ್ಟಪಡಿಸಬೇಕು. ಭಾರತೀಯ ನೌಕಾಪಡೆಯಲ್ಲಿ ನನ್ನ ಕರ್ತವ್ಯ ಮುಗಿದಿಲ್ಲ. ನಾನು ಈಗಲೂ ನೌಕಾಪಡೆಯಲ್ಲಿ ಕರ್ತವ್ಯದಲ್ಲಿದ್ದೇನೆ’ ಎಂದೂ ತಿಳಿಸಿದ್ದಾರೆ.

ಭೇಟಿ ನಂತರ ಇಸ್ಲಾಮಾಬಾದ್‌ನಲ್ಲಿರುವ ಭಾರತದ ಉಪ ಹೈಕಮಿಷನರ್ ಅವರ ಕುಟುಂಬದೊಂದಿಗೆ ಜಾಧವ್‌ ಕುಟುಂಬ ಉಳಿದುಕೊಂಡಿತ್ತು.

ಬೇಹುಗಾರಿಕೆ, ಭಯೋತ್ಪಾದನೆ ನಡೆಸಿರುವ ಆರೋಪದಲ್ಲಿ 47 ವರ್ಷ ವಯಸ್ಸಿನ ಜಾಧವ್‌ಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಮೇ ತಿಂಗಳಲ್ಲಿ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜಿ) ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.