ADVERTISEMENT

ಅರುಣಾಚಲ ಗಡಿಯಲ್ಲಿ ರಸ್ತೆ ನಿರ್ಮಾಣ ಕೈಬಿಟ್ಟ ಚೀನಾ

ಜನರಲ್‌ ಬಿಪಿನ್‌ ರಾವತ್‌ ಪ್ರಕಟ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ಬಿಪಿನ್‌ ಸಿಂಗ್‌ ರಾವತ್‌
ಬಿಪಿನ್‌ ಸಿಂಗ್‌ ರಾವತ್‌   

ನವದೆಹಲಿ: ಅರುಣಾಚಲ ಪ್ರದೇಶದ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯ ರಸ್ತೆ ನಿರ್ಮಾಣ ಕಾಮಗಾರಿ ನಿಲ್ಲಿಸಲು ಚೀನಾ ಒಪ್ಪಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಚೀನಾ ಕಾರ್ಮಿಕರಿಂದ ಭಾರತ ವಶಪಡಿಸಿಕೊಂಡಿದ್ದ ಯಂತ್ರೋಪಕರಣಗಳನ್ನು ಹಿಂದಿರುಗಿಸಿದೆ.

ಇದರೊಂದಿಗೆ ಕಳೆದ ಒಂದು ತಿಂಗಳಿಂದ ಭಾರತ– ಚೀನಾ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದ್ದ ಅರುಣಾಚಲ ಪ್ರದೇಶದ ಗಡಿಯಲ್ಲಿಯ ರಸ್ತೆ ನಿರ್ಮಾಣ ವಿವಾದ ಸುಖಾಂತ್ಯ ಕಂಡಿದೆ.

ಎರಡು ದಿನಗಳ ಹಿಂದೆ ಉಭಯ ರಾಷ್ಟ್ರಗಳ ಗಡಿ ಸಿಬ್ಬಂದಿ (ಬಿಪಿಎಂ)  ದ್ವಿಪಕ್ಷೀಯ ಸಭೆಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ಸಿಂಗ್‌ ರಾವತ್‌ ಅವರು ಸೋಮವಾರ ತಿಳಿಸಿದ್ದಾರೆ.

ADVERTISEMENT

ಅರುಣಾಚಲ ಪ್ರದೇಶದ ಟುಟಿಂಗ್‌ ಬಳಿಯ ಬಿಶಿಂಗ್‌ ಗಡಿಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದ ಚೀನಾ ಕಾರ್ಮಿಕರು ಒಂದು ಕಿಲೋಮೀಟರ್‌ವರೆಗೆ ಭಾರತದ ಗಡಿಯನ್ನು ಅತಿಕ್ರಮಣ ಮಾಡಿದ್ದರು.

ಡಿ.28ರಂದು ಇದನ್ನು ಪತ್ತೆಹಚ್ಚಿದ ಇಂಡೊ–ಟಿಬೇಟಿಯನ್‌ ಗಡಿ ಕಾವಲು ಪೊಲೀಸರು ಕಾಮಗಾರಿಯನ್ನು ತಡೆದಿದ್ದರು. ಅಲ್ಲದೇ, ಚೀನಾ ಕಾರ್ಮಿಕರಿಗೆ ಸೇರಿದ್ದ ಭಾರಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು.

‘ಚೀನಾ ಯೋಧರು ಭಾರತದ ಗಡಿಯನ್ನು ಅತಿಕ್ರಮಣ ಮಾಡಿ ರಸ್ತೆ ನಿರ್ಮಿಸುತ್ತಿದ್ದಾರೆ’ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಇದರಲ್ಲಿ ಚೀನಾ ಯೋಧರ ಪಾತ್ರ ಇರಲಿಲ್ಲ.

ದೋಕಲಾ ಸಂಘರ್ಷ ಸಮಯದಲ್ಲಿ ಆಕ್ರಮಣಶೀಲರಾಗಿದ್ದ ಚೀನಾ ಪಡೆಗಳು ಈ ವಿಷಯದಲ್ಲಿ ಪ್ರಬುದ್ಧತೆಯಿಂದ ವರ್ತಿಸಿವೆ. ಯಾವುದೇ ಕಾರಣಕ್ಕೂ ಭಾರತದ ಗಡಿಯನ್ನು ದಾಟದಂತೆ ತನ್ನ ಕಾರ್ಮಿಕರಿಗೆ ಸೂಚಿಸುವುದಾಗಿ ಭರವಸೆ ನೀಡಿದೆ.

ಅರುಣಾಚಲ ಪ್ರದೇಶದಲ್ಲಿ ಭಾರತ–ಚೀನಾ ಗಡಿಯಲ್ಲಿ 8–10 ಅತ್ಯಂತ ಸೂಕ್ಷ್ಮ ಪ್ರದೇಶಗಳಿವೆ. ಆದರೆ, ಟುಟಿಂಗ್‌ ಪ್ರದೇಶ ಎಂದಿಗೂ ಉಭಯ ರಾಷ್ಟ್ರಗಳ ಗಡಿ ಬಿಕ್ಕಟ್ಟಿಗೆ ಕಾರಣವಾಗಿರಲಿಲ್ಲ.
*
ಅತಿಕ್ರಮಣ ತೆರವಿಗೆ ಭಾರತ–ನೇಪಾಳ ಒಪ್ಪಂದ
ಬಲರಾಂಪುರ, ಉತ್ತರ ಪ್ರದೇಶ (ಪಿಟಿಐ):
ಭಾರತ ಮತ್ತು ನೇಪಾಳದ ಗಡಿಯುದ್ದಕ್ಕೂ ಹಾನಿಗೊಳಗಾದ ಸ್ತಂಭಗಳ ಮರುನಿರ್ಮಾಣ ಹಾಗೂ ವಿವಾದಿತ ಪ್ರದೇಶಗಳಲ್ಲಿನ ಅತಿಕ್ರಮಣ ತೆರವುಗೊಳಿಸುವ ಕುರಿತಾದ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.

‘ಇಲ್ಲಿನ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಗ್ರೂಪ್‌ ಸೆಂಟರ್‌ನಲ್ಲಿ ನಡೆದ ಸಭೆಯಲ್ಲಿ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡಿವೆ. ಈ ಸಭೆಯಲ್ಲಿ ನೇಪಾಳದ ಆರು ಅಧಿಕಾರಿಗಳು ಹಾಗೂ ಉತ್ತರ ಪ್ರದೇಶದ ಐದು ಜಿಲ್ಲೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು’ ಎಂದು ಬಲರಾಂಪುರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ರಾಕೇಶ್‌ ಕುಮಾರ್‌ ಮಿಶ್ರಾ ಹೇಳಿದರು.

‘ಮೂರು ಭಾಗಗಳಲ್ಲಿ ಗಡಿಯ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ ಸಮೀಕ್ಷೆ ನಡೆಸುವ ತಜ್ಞರ ಗುಂಪು ಆಗಮಿಸಿದೆ. ಎಸ್‌ಎಸ್‌ಬಿ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಹಾಗೂ ನೇಪಾಳಿ ಪೊಲೀಸರು ಈ ಕಾರ್ಯದಲ್ಲಿ ಕೈಜೋಡಿಸಲಿದ್ದಾರೆ’ ಎಂದು ಅವರು ವಿವರಿಸಿದರು. ಈ ಕಾರ್ಯ ಎರಡೂ ದೇಶಗಳ ಬಾಂಧವ್ಯವನ್ನು ಹೆಚ್ಚಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ನೇಪಾಳದ ಗಡಿಭಾಗದಲ್ಲಿ ಉತ್ತರ ಪ್ರದೇಶವು 599.3 ಕಿ.ಮೀ ವಿಸ್ತೀರ್ಣದ ಜಾಗವನ್ನು ಹಂಚಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.