ADVERTISEMENT

₹ 3,500 ಕೋಟಿ ಮೊತ್ತದ ಬೇನಾಮಿ ಆಸ್ತಿ ವಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:42 IST
Last Updated 11 ಜನವರಿ 2018, 19:42 IST
₹ 3,500 ಕೋಟಿ ಮೊತ್ತದ ಬೇನಾಮಿ ಆಸ್ತಿ ವಶ
₹ 3,500 ಕೋಟಿ ಮೊತ್ತದ ಬೇನಾಮಿ ಆಸ್ತಿ ವಶ   

ನವದೆಹಲಿ: ಬೇನಾಮಿ ಆಸ್ತಿ ವಹಿವಾಟು ತಡೆ ಕಾಯ್ದೆ ಅನ್ವಯ ದೇಶದಾದ್ಯಂತ ಇದುವರೆಗೆ ನಡೆಸಿದ ದಾಳಿಯಲ್ಲಿ  ₹ 3,500 ಕೋಟಿಗಳಿಗೂ ಹೆಚ್ಚಿನ ಮೊತ್ತದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಫ್ಲ್ಯಾಟ್ಸ್‌, ನಿವೇಶನ, ಮಳಿಗೆ, ಚಿನ್ನಾಭರಣ, ಬ್ಯಾಂಕ್‌ ಠೇವಣಿ ಮತ್ತು ವಾಹನ ಸೇರಿದಂತೆ 900ಕ್ಕೂ ಹೆಚ್ಚು ಬೇನಾಮಿ ಆಸ್ತಿಗಳನ್ನು ಜಪ್ತಿ ಮಾಡ
ಲಾಗಿದೆ. 2016ರ ನವೆಂಬರ್ 1ರಿಂದ ಈ ಕಾಯ್ದೆ ಜಾರಿಗೆ ಬಂದಿದೆ. ಕಾಯ್ದೆಯು ಆಸ್ತಿಗಳನ್ನು ತಾತ್ಪೂರ್ತಿಕವಾಗಿ ವಶಪಡಿಸಿಕೊಳ್ಳಲು ನಂತರ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಬೇನಾಮಿ ಆಸ್ತಿಯ ಪ್ರಯೋಜನ ಪಡೆದ ಮಾಲೀಕ,  ಬೇನಾಮಿ ವಹಿವಾಟು ನಡೆಸಲು ಪ್ರೇರಣೆ ನೀಡಿದವರನ್ನು ವಿಚಾರಣೆಗೆ ಗುರಿ‍ಪಡಿಸಲೂ ಅವಕಾಶ ಇದೆ. ತಪ್ಪಿತಸ್ಥರಿಗೆ 7 ವರ್ಷಗಳ ಕಠಿಣ ಶಿಕ್ಷೆ ವಿಧಿಸಲು ಮತ್ತು ವಶಪಡಿಸಿಕೊಂಡ ಆಸ್ತಿಯ ಶೇ 25ರಷ್ಟು ದಂಡ ವಿಧಿಸಬಹುದು.

ADVERTISEMENT

ಆದಾಯ ತೆರಿಗೆ ಇಲಾಖೆಯು ತನ್ನ ತನಿಖಾ ನಿರ್ದೇಶನಾಲಯದಡಿ ದೇಶದಾದ್ಯಂತ  24 ಬೇನಾಮಿ ವಹಿವಾಟು ತಡೆ ಘಟಕಗಳನ್ನು ಸ್ಥಾಪಿಸಿದೆ. ಬೇನಾಮಿ ಆಸ್ತಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು  ಈ ಘಟಕಗಳು ನೆರವಾಗುತ್ತಿವೆ. ವಶಪಡಿಸಿಕೊಂಡಿರುವ ಆಸ್ತಿಗಳಲ್ಲಿ ₹ 2,900 ಕೋಟಿಗಳಿಗಿಂತ ಹೆಚ್ಚಿನ ಮೊತ್ತದ ಸ್ಥಿರಾಸ್ತಿಗಳಿವೆ ಎಂದು ಇಲಾಖೆ ತಿಳಿಸಿದೆ.

***
ಅನಾಮಧೇಯ ಹೆಸರಿನಲ್ಲಿ ವಹಿವಾಟು ನಡೆಸುವುದು, ಕಾನೂನುಬದ್ಧ ಮಾಲೀಕನ ಹೆಸರು ಉಲ್ಲೇಖಿಸದಿರುವುದು  ಬೇನಾಮಿ ವಹಿವಾಟು ಆಗಿರುತ್ತದೆ. ನಿಜವಾದ ಫಲಾನುಭವಿ ಬದಲಿಗೆ ಬೇರೊಬ್ಬರ ಅಥವಾ ಕಪೋಲಕಲ್ಪಿತ ಹೆಸರಿನಲ್ಲಿ ಆಸ್ತಿಪಾಸ್ತಿ ಖರೀದಿಸುವುದೂ ಬೇನಾಮಿ ವಹಿವಾಟು ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.