ADVERTISEMENT

ಸಿಬಿಐ ವಿವರಣೆ ಕೋರಿದ ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST

ನವದೆಹಲಿ: ಶಿಕ್ಷೆ ಆದೇಶ ಮರು ಪರಿಶೀಲನೆ ಕೋರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ಎ.ಜಿ. ಪೇರ್ ಅರಿವಾಳನ್ ಹೊಸದಾಗಿ ಸಲ್ಲಿಸಿದ ಅರ್ಜಿಯ ಸಂಬಂಧ ಸುಪ್ರಿಂ ಕೋರ್ಟ್ ಬುಧವಾರ ಸಿಬಿಐನಿಂದ ವಿವರಣೆ ಕೋರಿದೆ.

ರಾಜೀವ್‌ ಹತ್ಯೆ ಪ್ರಕರಣದಲ್ಲಿ ತನಗೆ ವಿಧಿಸಿದ್ದ ಶಿಕ್ಷೆಯ ಆದೇಶ ಎತ್ತಿ ಹಿಡಿದಿದ್ದ ನ್ಯಾಯಾಲಯದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಅರಿವಾಳನ್‌ ಹೊಸದಾಗಿ ಅರ್ಜಿ ಸಲ್ಲಿಸಿದ್ದಾನೆ.

ತಾನು ನೀಡಿದ ಒಂಬತ್ತು ವೋಲ್ಟ್‌ ಬ್ಯಾಟರಿಗಳನ್ನು ರಾಜೀವ್‌ ಹತ್ಯೆಗೆ ಬಾಂಬ್‌ ತಯಾರಿಸಲು ಬಳಸುತ್ತಾರೆ ಎಂಬ ಅರಿವು ಅರಿವಾಳನ್‌ಗೆ ಇರಲಿಲ್ಲ ಎಂದು ಸಿಬಿಐ ನೀಡಿದ ಪ್ರಮಾಣಪತ್ರವನ್ನು ಆತನ ವಕೀಲರು ವಾದ ಸಮರ್ಥನೆಗೆ ಬಳಸಿಕೊಂಡರು.

ADVERTISEMENT

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ಮತ್ತು ಆರ್‌. ಭಾನುಮತಿ ಅವರ ಪೀಠ, ಮೂರು ವಾರಗಳ ಒಳಗಾಗಿ ವಿವರಣೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ. ಅರ್ಜಿಯ ವಿಚಾರಣೆಯನ್ನು ಫೆಬ್ರುವರಿ 22ಕ್ಕೆ ಮುಂದೂಡಿದೆ.

‘ಪ್ರಕರಣದ ಮರು ವಿಚಾರಣೆಗೆ ಅಗತ್ಯವಿದೆಯೇ’ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ, ಪೇರ್ ಅರಿವಾಳನ್ ಪರ ವಕೀಲರು, ‘ಬೇರೆ ಮಾರ್ಗವಿಲ್ಲ’ ಎಂದು ಉತ್ತರಿಸಿದರು.

ರಾಜೀವ್ ಹಂತಕರ ಬಿಡುಗಡೆಗೆ ತಮಿಳುನಾಡು ಸರ್ಕಾರ ಬರೆದ ಪತ್ರದ ಕುರಿತು ಮೂರು ತಿಂಗಳ ಒಳಗಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.