ADVERTISEMENT

ಪದ್ಮಾವತ್‌ ಚಿತ್ರ ತೆರೆಗೆ ಮೊದಲೇ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
‘ಪದ್ಮಾವತ್‌’ ಚಿತ್ರ ಬಿಡುಗಡೆಯ ವಿರುದ್ಧ ಕರ್ಣಿ ಸೇನಾ ಕಾರ್ಯಕರ್ತರು ಭೋಪಾಲ್‌ನಲ್ಲಿ ಬುಧವಾರ ನಡೆಸಿದ ಪ್ರತಿಭಟನಾ ರ‍್ಯಾಲಿ ವೇಳೆ ಕಾರೊಂದಕ್ಕೆ ಹಚ್ಚಿದ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಯತ್ನಿಸಿದರು.
‘ಪದ್ಮಾವತ್‌’ ಚಿತ್ರ ಬಿಡುಗಡೆಯ ವಿರುದ್ಧ ಕರ್ಣಿ ಸೇನಾ ಕಾರ್ಯಕರ್ತರು ಭೋಪಾಲ್‌ನಲ್ಲಿ ಬುಧವಾರ ನಡೆಸಿದ ಪ್ರತಿಭಟನಾ ರ‍್ಯಾಲಿ ವೇಳೆ ಕಾರೊಂದಕ್ಕೆ ಹಚ್ಚಿದ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಯತ್ನಿಸಿದರು.   

ನವದೆಹಲಿ: ರಜಪೂತ ಸಂಘಟನೆಗಳ ವಿರೋಧದ ನಡುವೆಯೇ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್‌’ ಚಿತ್ರ ದೇಶದೆಲ್ಲೆಡೆ ಗುರುವಾರ ತೆರೆ ಕಾಣಲಿದೆ.

ಚಿತ್ರದ ಬಿಡುಗಡೆ ವಿರೋಧಿಸಿ ಕರ್ಣಿ ಸೇನಾ ಸೇರಿದಂತೆ ಇತರೆ ರಜಪೂತ ಸಂಘಟನೆಗಳು ರಾಜಸ್ಥಾನ, ಗುಜರಾತ್‌, ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ಮತ್ತು ಬಿಹಾರಗಳಲ್ಲಿ ಹಿಂಸಾಚಾರಕ್ಕೆ ಇಳಿದಿವೆ. ಹೆದ್ದಾರಿ, ರೈಲು ತಡೆ ನಡೆಸಿ ಆಸ್ತಿಗಳಿಗೆ ಹಾನಿ ಮಾಡಿವೆ.

ವಿವಿಧ ನಗರಗಳಲ್ಲಿ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ದಾಂದಲೆ ನಡೆಸಿರುವ ಉದ್ರಿಕ್ತರು ಚಿತ್ರ ಬಿಡುಗಡೆ ಮಾಡದಂತೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಹರಿಯಾಣದ ಗುರುಗ್ರಾಮ, ರಾಜಸ್ಥಾನದ ಜೈಪುರ ಸೇರಿದಂತೆ ವಿವಿಧ ನಗರಗಳಲ್ಲಿ ಸರ್ಕಾರಿ ಬಸ್‌ಗಳ ಗಾಜುಗಳನ್ನು ಒಡೆದು ಹಾಕಿ ಬೆಂಕಿ ಹಚ್ಚಿದ್ದಾರೆ.

ADVERTISEMENT

ಚಿತ್ರ ವೀಕ್ಷಿಸದಂತೆ ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್‌ ಕಾಲವಿ ಸೇರಿದಂತೆ ಸಂಘಟನೆಗಳ ಮುಖಂಡರು ಕರೆ ನೀಡಿದ್ದಾರೆ.

ರಾಜ್ಯದಲ್ಲಿ ಬುಧವಾರವೇ ತೆರೆಗೆ
ಬೆಂಗಳೂರು: 
‘ಪದ್ಮಾವತ್’ ಚಿತ್ರ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಬುಧವಾರವೇ ತೆರೆಗೆ ಬಂದಿದೆ.

ರಾಜಧಾನಿಯ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಬುಧವಾರ ಸಂಜೆ ಆರು ಗಂಟೆಯ ನಂತರ ಪ್ರದರ್ಶನ ಆರಂಭವಾಯಿತು. ಟಿಕೆಟ್ ದರ ಕೆಲವು ಕಡೆ ₹ 1,000 ನಿಗದಿ ಮಾಡಲಾಗಿದೆ.

‘ಈ ಸಿನಿಮಾ ಬಗ್ಗೆ ಜನರಲ್ಲಿ ಇರುವ ಕುತೂಹಲದ ಪ್ರಯೋಜನ ಪಡೆದುಕೊಳ್ಳುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ. ಗುರುವಾರದ ಬಂದ್‌ಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಪ್ರದರ್ಶಕ ಕೆ.ಸಿ. ಮೋಹನ್ ಹೇಳಿದರು.

‘ರಾಜ್ಯದಲ್ಲಿ ಎಲ್ಲೆಲ್ಲಿ 3–ಡಿ ಸಿನಿಮಾ ಪರದೆ ಇದೆಯೋ, ಅಲ್ಲೆಲ್ಲ ಚಿತ್ರ ಬಿಡುಗಡೆ ಆಗಿದೆ’ ಎಂದು ಓಂ ಸಾಯಿ ಮೂವೀಸ್ ಪ್ರತಿನಿಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ರಾಜ್ಯದಲ್ಲಿ ‘ಪದ್ಮಾವತ್’ ಸಿನಿಮಾ ವಿತರಣೆಯನ್ನು ಈ ಸಂಸ್ಥೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.