ADVERTISEMENT

ಕಾಸ್‌ಗಂಜ್ ಹಿಂಸಾಚಾರ: ಪ್ರಮುಖ ಆರೋಪಿ ಸೆರೆ

ಪಿಟಿಐ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಕಾಸ್‌ಗಂಜ್ ಹಿಂಸಾಚಾರ: ಪ್ರಮುಖ ಆರೋಪಿ ಸೆರೆ
ಕಾಸ್‌ಗಂಜ್ ಹಿಂಸಾಚಾರ: ಪ್ರಮುಖ ಆರೋಪಿ ಸೆರೆ   

ಲಖನೌ: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಚಂದನ್ ಗುಪ್ತಾ ಎಂಬ ಯುವಕನನ್ನು ಹತ್ಯೆ ಮಾಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಬುಧವಾರ ಹೇಳಿದ್ದಾರೆ.

‘ಪ್ರಮುಖ ಆರೋಪಿ ಸಲೀಂ ಎಂಬಾತನನ್ನು ಬಂಧಿಸಲಾಗಿದೆ. ಚಂದನ್ ಗುಪ್ತಾ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ’ ಎಂದು ಅಲೀಗಡ ವಲಯದ ಐಜಿ ಸಂಜೀವ್ ಗುಪ್ತಾ ಹೇಳಿದ್ದಾರೆ. ಸಲೀಂ ಸೋದರರಾದ ನಸೀಂ ಹಗೂ ವಾಸೀಂ ಅವರೂ ಸಹ ಆರೋಪಿಗಳಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಚಂದನ್ ಗುಪ್ತಾ ಕೊಲೆ ಬಳಿಕ ಕಾಸ್‌ಗಂಜ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಗಣರಾಜ್ಯೋತ್ಸವ ಮೆರವಣಿಗೆ ಮೇಲೆ ಕಲ್ಲೂತೂರಾಟ ನಡೆದ ಬಳಿಕ ಇಲ್ಲಿ ಕೋಮು ಘರ್ಷಣೆ ಉಂಟಾಗಿತ್ತು. ಘಟನೆ ಸಂಬಂಧ ಈವರೆಗೆ 150ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.

ADVERTISEMENT

ಪರಿಸ್ಥಿತಿ ಶಾಂತ:  ಈ ಮಧ್ಯೆ ಕಾಸ್‌ಗಂಜ್ ಗಡಿಗೆ ಸಮೀಪದ ಮಿರ್ಹಾಚಿ ಪ್ರದೇಶದಲ್ಲಿ ಕಾಂಗ್ರೆಸ್ ನಿಯೋಗಕ್ಕೆ ಜಿಲ್ಲಾಡಳಿತ ತಡೆ ಒಡ್ಡಿದೆ. ಗಲಭೆಪೀಡಿದ ಪ್ರದೇಶಗಳಿಗೆ ತೆರಳುವುದರಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆಯಿದ್ದು, ಅನುಮತಿ ನಿರಾಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಪಿ. ಸಿಂಗ್ ಹೇಳಿದ್ದಾರೆ.

ಗಲಭೆಪೀಡಿತ ಪ್ರದೇಶದಲ್ಲಿ ಪರಿಸ್ಥಿತಿ ಬಹುತೇಕ ಸಹಜ ಸ್ಥಿತಿಗೆ ಮೆರಳಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಿರಂತರ ಗಸ್ತು ತಿರುಗುತ್ತಿವೆ.

ವರದಿ ಸಲ್ಲಿಕೆ:  ಕಾಸ್‌ಗಂಜ್ ಹಿಂಸಾಚಾರ ಹಾಗೂ ಅದರ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಕುರಿತು ಉತ್ತರ ಪ್ರದೇಶ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಬುಧವಾರ ವರದಿ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.