ADVERTISEMENT

ವಿದೇಶಿ ಕಂಪನಿಗಳಿಂದ ಕಾಂಗ್ರೆಸ್‌, ಬಿಜೆಪಿಗೆ ಕಾನೂನುಬಾಹಿರ ದೇಣಿಗೆ: ಸಂಕಷ್ಟದಿಂದ ಪಾರಾಗಲು ಎಫ್‌ಸಿಆರ್‌ಗೆ ತಿದ್ದುಪಡಿ

ಏಜೆನ್ಸೀಸ್
Published 2 ಫೆಬ್ರುವರಿ 2018, 10:54 IST
Last Updated 2 ಫೆಬ್ರುವರಿ 2018, 10:54 IST
ವಿದೇಶಿ ಕಂಪನಿಗಳಿಂದ ಕಾಂಗ್ರೆಸ್‌, ಬಿಜೆಪಿಗೆ ಕಾನೂನುಬಾಹಿರ ದೇಣಿಗೆ: ಸಂಕಷ್ಟದಿಂದ ಪಾರಾಗಲು ಎಫ್‌ಸಿಆರ್‌ಗೆ ತಿದ್ದುಪಡಿ
ವಿದೇಶಿ ಕಂಪನಿಗಳಿಂದ ಕಾಂಗ್ರೆಸ್‌, ಬಿಜೆಪಿಗೆ ಕಾನೂನುಬಾಹಿರ ದೇಣಿಗೆ: ಸಂಕಷ್ಟದಿಂದ ಪಾರಾಗಲು ಎಫ್‌ಸಿಆರ್‌ಗೆ ತಿದ್ದುಪಡಿ   

ನವದೆಹಲಿ: ಪಕ್ಷಗಳಿಗೆ ವಿದೇಶಿ ಕಂಪೆನಿಗಳಿಂದ ಅಕ್ರಮವಾಗಿ ಹರಿದು ಬರುವ ದೇಣಿಗೆಯ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪೂರಕವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2018ರ ಬಜೆಟ್‌ಅನ್ನು ಬಳಸಿಕೊಳ್ಳಲು ಮುಂದಾಗಿದೆ.

40 ವರ್ಷಗಳ ಹಿಂದೆ ಕಾನೂನನ್ನು ಉಲ್ಲಂಘಿಸಿದ ಪಕ್ಷಗಳು ಈಗ ಅದರಿಂದ ಮುಕ್ತಿ ಪಡೆದುಕೊಳ್ಳುತ್ತಿವೆ.

ಲಂಡನ್‌ ಮೂಲದ ಬಹುರಾಷ್ಟ್ರೀಯ ವೇದಾಂತ ಕಂಪೆನಿಯಿಂದ ದೇಣಿಗೆ ಪಡೆದು ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ರಾಜಕೀಯ ಪಕ್ಷಗಳು ‘ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ–2010’ಅನ್ನು (ಎಫ್‌ಸಿ ಆರ್‌ಎ) ಉಲ್ಲಂಘಿಸಿವೆ. ಇದರಿಂದ ಪಾರಾಗುವ ಅಂಶವೊದಂದನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು 2016ರ ಹಣಕಾಸು ಮಸೂದೆಯಲ್ಲಿ ಯಾರಿಗೂ ಮೇಲ್ನೋಟಕ್ಕೆ ಕಾಣದಂತೆ ಸೇರಿಸಿದ್ದರು. ಪ್ರಸ್ತುತ ಹಣಕಾಸು ಮಸೂದೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ‘ದಿ ವೈರ್’ ವರದಿ ಮಾಡಿದೆ.

ADVERTISEMENT

ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಅವರು ವಿದೇಶಗಳಿಂದ ಅಕ್ರಮವಾಗಿ ದೇಣಿಗೆ ಸಂಗ್ರಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ಮನೆ ಮತ್ತು ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಹಣಕಾಸು ವಹಿವಾಟಿನ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಎಫ್‌ಸಿಆರ್‌ಎಯ 2016 ತಿದ್ದುಪಡಿಯಲ್ಲಿ ವಿದೇಶಿ ಕಂಪನಿಗಳು ಭಾರತೀಯ ಘಟಕದ ತಮ್ಮ ಮಾಲೀಕತ್ವದ ಕುರಿತು ಬದಲಾವಣೆ ಮಾಡಲಾಯಿತು. ಇದರಲ್ಲಿ 2010 ರಿಂದ ಮಾತ್ರ ಅನ್ವಯವಾಗುವಂತೆ ಮರುಪರಿಶೀಲನೆ ಮಾಡಲಾಯಿತು.

ಇದರರ್ಥ 2010ರ ಮೊದಲು ವಿದೇಶಿ ಕಂಪೆನಿಗಳಿಂದ ಪಡೆದ ದೇಣಿಗೆಗಳು ತಿದ್ದುಪಡಿಯ ವ್ಯಾಪ್ತಿಗೆ ಬರುವುದಿಲ್ಲ. ವಿಪರ್ಯಾಸವೆಂದರೆ, ವೇದಾಂತ ಕಂಪನಿ ದೇಣಿಗೆ ನೀಡಿರುವುದು 2010ಕ್ಕೂ ಮೊದಲು.

2018ರ ಹಣಕಾಸು ಮಸೂದೆಯಲ್ಲಿ ಮತ್ತೆ ಹೊಸ ತಿದ್ದುಪಡಿ ಮಾಡಿದೆ. ಈ ಸಂಬಂಧ ಗುರುವಾರ ಬಜೆಟ್ ಮಂಡನೆ ಮಾಡಿದ ನಂತರ ಸಾರ್ವಜನಿಕವಾಗಿ ಪ್ರಕಟಿಸಲ್ಪಟ್ಟಿತು.

ಏನಿದು ಎಫ್‌ಸಿಆರ್‌ಎ?
ವಿದೇಶಿ ದೇಣಿಗೆ ಸ್ವೀಕರಿಸುವ ಕೆಲ ವ್ಯಕ್ತಿಗಳು, ಸಂಘ ಸಂಸ್ಥೆಗಳು, ಸಂಘಟನೆಗಳು ಮತ್ತು ಕಂಪೆನಿಗಳು ಆ ಹಣವನ್ನು ದೇಶದ ಹಿತಾಸಕ್ತಿಗೆ ಧಕ್ಕೆ ತರುವ ಉದ್ದೇಶಗಳಿಗೆ ಬಳಸುವುದನ್ನು ‘ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ–2010’ (ಎಫ್‌ಸಿಆರ್‌ಎ) ನಿರ್ಬಂಧಿಸುತ್ತದೆ.

ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) 1976ರಲ್ಲಿ ರಚನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.