ADVERTISEMENT

ಕಾವೇರಿ ತೀರ್ಪು ಪ್ರಸ್ತಾಪಿಸಿದ ಗೋವಾ

ಮಹದಾಯಿ ಜಲವಿವಾದ: ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಇಂದು ತೆರೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ನವದೆಹಲಿ: ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿರುವ ಕಾವೇರಿ ತೀರ್ಪಿನ ಕುರಿತು ಮಹದಾಯಿ ಜಲವಿವಾದ ನ್ಯಾಯಮಂಡಳಿ ಎದುರು ಮಂಗಳವಾರ ಪ್ರಸ್ತಾಪಿಸಿದ ಗೋವಾ, ಜಲ ವಿದ್ಯುತ್ ಉತ್ಪಾದನೆ ಉದ್ದೇಶಕ್ಕೆ ಕೇರಳಕ್ಕೆ ಕಾವೇರಿ ಕಣಿವೆಯ ಆಚೆ ನೀರು ಹಂಚಿಕೆ ಮಾಡಲು ಒಪ್ಪಿಗೆ ನೀಡಲಾಗಿಲ್ಲ ಎಂದು ತಿಳಿಸಿತು.

ಮಹದಾಯಿ ನೀರು ಹಂಚಿಕೆ ಕುರಿತ ವಿಚಾರಣೆಯ ವೇಳೆ ಗೋವಾ ಪರ ವಾದ ಮಂಡಿಸಿದ ಹಿರಿಯ ವಕೀಲ ಆತ್ಮಾರಾಮ್‌ ನಾಡಕರ್ಣಿ, ಜಲವಿದ್ಯುತ್‌ ಉತ್ಪಾದನೆಗಾಗಿ ಕಾವೇರಿಯ 35 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇರಿಸಿದ್ದ ಕೇರಳದ ವಾದವನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿದೆ ಎಂದರು.

ನದಿ ತಿರುವು ಯೋಜನೆ ಮೂಲಕ ಮಹದಾಯಿಯ ನೀರನ್ನು ಕಾಳಿ ನದಿಯತ್ತ ಹರಿಸುವ ಮೂಲಕ ಕಣಿವೆಯ ಆಚೆಯೂ ನೀರನ್ನು ಕೊಂಡೊಯ್ದು, ಜಲ ವಿದ್ಯುತ್‌ ಉತ್ಪಾದಿಸುವ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಕರ್ನಾಟಕ ತಿಳಿಸಿದೆ. ಸುಪ್ರೀಂ ಕೋರ್ಟ್‌ ಕೇರಳದ ಮನವಿಯನ್ನು ತಳ್ಳಿ ಹಾಕಿರುವಂತೆ ನ್ಯಾಯಮಂಡಳಿಯೂ ಕರ್ನಾಟಕದ ಬೇಡಿಕೆಯನ್ನು ತಳ್ಳಿ ಹಾಕಬೇಕು ಎಂದು ಅವರು ಕೋರಿದರು.

ADVERTISEMENT

‘ಕೇರಳದಲ್ಲಿ ಸುರಿಯುವ ಮಳೆಯಿಂದಾಗಿಯೇ 147 ಟಿಎಂಸಿ ಅಡಿ ನೀರು ಕಾವೇರಿ ನದಿ ಸೇರುತ್ತಿದೆ. ಆ ಬಾಬತ್ತಿನಲ್ಲಿ ನಮ್ಮ ಯೋಜನೆಗಳಿಗೆ 35 ಟಿಎಂಸಿ ಅಡಿ ನೀರು ನೀಡಬೇಕು. ತಮಿಳುನಾಡಿನ ಭವಾನಿ ಬಳಿಯಿಂದ ಕಾವೇರಿ ನೀರನ್ನು ಹರಿಸಿ, ವಿದ್ಯುತ್‌ ಉತ್ಪಾದಿಸಲು ಅವಕಾಶ ನೀಡಬೇಕು ಎಂಬುದಾಗಿ ಕೇರಳ ಮನವಿ ಮಾಡಿತ್ತು’ ಎಂದು ವಿವರಿಸಿದ ನಾಡಕರ್ಣಿ, ನ್ಯಾಯ ಪೀಠಕ್ಕೆ ಕಾವೇರಿ ತೀರ್ಪಿನ ಪ್ರತಿಯನ್ನು ಹಸ್ತಾಂತರಿಸಿದರು.

ಬ್ರಿಟಿಷ್‌ ಆಡಳಿತದ ಅವಧಿಯಲ್ಲಿ ಮದ್ರಾಸ್‌ ಪ್ರೆಸಿಡೆನ್ಸಿ ಹಾಗೂ ಮೈಸೂರು ಸಂಸ್ಥಾನಗಳ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಮಾಡಿಕೊಳ್ಳಲಾದ ಒಪ್ಪಂದವನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್‌ ಎದುರು ವಾದ ಮಂಡಿಸಿರುವ ಕರ್ನಾಟಕ, ಹೆಚ್ಚು ನೀರು ಹರಿಸುವುದರಿಂದ ಎದುರಾಗಬಹುದಾದ ಹಾನಿ ಮತ್ತು ನೀರಿನ ಮೇಲೆ ತನಗಿರುವ ಹಕ್ಕಿನ ಕುರಿತು ಪ್ರತಿಪಾದಿಸಿದೆ. ಅದೇ ರೀತಿ ಗೋವಾ ಸಹ ಮಹದಾಯಿ ನದಿ ನೀರಿನ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುತ್ತದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಜಲ ನೀತಿಯಲ್ಲಿಯೂ ಜಲವಿದ್ಯುತ್‌ ಯೋಜನೆಗೆ ಅಷ್ಟಾಗಿ ಆದ್ಯತೆ ನೀಡಲಾಗಿಲ್ಲ ಎಂದು ಹೇಳಿದ ಅವರು, ‘ಮಹದಾಯಿ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳುವ ಮೂಲಕ ನಾವು ನೀರನ್ನು ಎಲ್ಲಿಗಾದರೂ ಹರಿಸುತ್ತೇವೆ. ಬಳಕೆಯಾದ ನಂತರ ಆ ನೀರು ಚರಂಡಿ ಮೂಲಕ ಹರಿದರೂ ತಪ್ಪಿಲ್ಲ’ ಎಂದು ಕರ್ನಾಟಕ ವಾದ ಮಾಡಿದೆ ಎಂದು ಹೇಳಿದರು.

ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪರ ವಕೀಲ ಮೋಹನ್‌ ಕಾತರಕಿ, ‘ನಾವು ಆ ರೀತಿ ವಾದ ಮಂಡಿಸಿಲ್ಲ. ನೀವು ಇನ್ನೊಮ್ಮೆ ಪರಿಶೀಲಿಸಿ, ಹೇಳಿಕೆ ಹಿಂದಕ್ಕೆ ಪಡೆಯಿರಿ’ ಎಂದು ಸೂಚಿಸಿದರು.

ಕರ್ನಾಟಕವು ನದಿ ತಿರುವು ಯೋಜನೆ ಆರಂಭಿಸಿದಲ್ಲಿ ಮಹದಾಯಿಯ ನೈಸರ್ಗಿಕ ಹರಿವಿಗೆ ಧಕ್ಕೆ ಆಗುವುದಲ್ಲದೆ, ಕುಡಿಯುವ ನೀರಿಗಾಗಿ ಮಹದಾಯಿಯನ್ನೇ ನೆಚ್ಚಿಕೊಂಡಿರುವ ಗೋವಾ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ನಾಡಕರ್ಣಿ ಅವರು ಪುನರುಚ್ಚರಿಸಿದರು.

‘ಮಹದಾಯಿ ನದಿಯು ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳಂತಲ್ಲ. ಬದಲಿಗೆ ಇದು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ನದಿಯಾಗಿದೆ’ ಎಂದು ಅವರು ಹೇಳುತ್ತಿದ್ದಂತೆಯೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾತರಕಿ, ‘ದೇಶದಲ್ಲಿರುವ ಎಲ್ಲ ನದಿಗಳೂ ಮಳೆಯನ್ನೇ ಆಧರಿಸಿ ಹರಿಯುವಂಥವು. ಕೃಷ್ಣಾ, ಕಾವೇರಿ ಮತ್ತು ಗೋದಾವರಿ ನದಿಗಳೂ ಅದಕ್ಕೆ ಹೊರತಲ್ಲ’ ಎಂದರು.

ಹಿಮಾಲಯದಲ್ಲಿ ಹುಟ್ಟುವ ಕೆಲವು ನದಿಗಳಲ್ಲಿ ಹಿಮ ಕರಗಿ ನೀರು ಸೇರಿಕೊಳ್ಳುತ್ತದೆ. ಆದರೆ, ಅಂಥ ನದಿಗಳೂ ಮಳೆಯನ್ನೇ ಆಧರಿಸಿವೆ. ದೇಶದಲ್ಲಿ ಮಳೆ ಸುರಿಯದೆಯೇ ತುಂಬಿ ಹರಿಯವಂಥ ನದಿಗಳಿಲ್ಲ ಎಂದು ನ್ಯಾಯಮೂರ್ತಿ ವಿನಯ್‌ ಮಿತ್ತಲ್‌ ಹೇಳಿದರು.

ಮಹದಾಯಿ ನೀರಿನ ಲಭ್ಯತೆ ಹಾಗೂ ಮಳೆಯ ಪ್ರಮಾಣದ ಕುರಿತೂ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಸಮರ್ಪಕ ವರದಿ ಸಲ್ಲಿಸಿಲ್ಲ. ಅದೇ ವರದಿಯನ್ನು ಆಧರಿಸಿ ತನ್ನ ಅಭಿಪ್ರಾಯ ಮಂಡಿಸಿರುವ ಕರ್ನಾಟಕದ ಪರ ತಜ್ಞರಾದ ಪ್ರೊ.ಎ.ಕೆ. ಗೋಸೆನ್‌ ಅವರು ಮಳೆಯ ಸಂಪೂರ್ಣ ನೀರು ಮಹದಾಯಿ ನದಿಯನ್ನೇ ಸೇರುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಅದು ಸತ್ಯಕ್ಕೆ ದೂರವಾದದ್ದು. ಪಶ್ಚಿಮ ಘಟ್ಟದಲ್ಲಿ ಸುರಿದ ಮಳೆಯ ನೀರಿನಲ್ಲಿ ಶೇ 65ರಷ್ಟು ಮಾತ್ರ ನದಿಗುಂಟ ಹರಿಯುತ್ತದೆ ಎಂದು ನಾಡಕರ್ಣಿ ತಿಳಿಸಿದರು.

ಮಂಗಳವಾರ ಗೋವಾದ ವಾದ ಪೂರ್ಣಗೊಂಡಿದೆ. ಬುಧವಾರ ಕರ್ನಾಟಕ ವಾದ ಮಂಡಿಸಲಿದೆ. ಅಂತಿಮ ಹಂತದ ವಿಚಾರಣೆ ಪೂರ್ಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.