ADVERTISEMENT

ಗ್ರೆನೆಡ್‌ ಸ್ಪೋಟ: ಆರು ಮಕ್ಕಳು ಗಾಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 20:00 IST
Last Updated 27 ಏಪ್ರಿಲ್ 2020, 20:00 IST

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಕ್ವಾಜಿಗುಂಡ ಎಂಬಲ್ಲಿ ಸೋಮವಾರ ಗ್ರೆನೆಡ್‌ ಮಾದರಿಯ ಸ್ಪೋಟಕ ಸ್ಪೋಟಗೊಂಡು ಆರು ಮಕ್ಕಳು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ.

ಭದ್ರತಾ ಪಡೆಗಳು ಸೋಮವಾರ ಮುಂಜಾನೆ ಇದೇ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದರು.

ಕಾರ್ಯಾಚರಣೆ ಮುಗಿದ ನಂತರ ಘಟನಾ ಸ್ಥಳದಲ್ಲಿ ಮಕ್ಕಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಈ ವೇಳೆ ಗ್ರೆನೆಡ್‌ ಸ್ಪೋಟಗೊಂಡು ಏಳು ಮಂದಿ ಗಾಯಗೊಂಡರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದರು.

‘ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಇಲ್ಲಿನ ಮನೆಯೊಂದು ಧ್ವಂಸಗೊಂಡಿತ್ತು. ಆ ಮನೆಯ ಅವಶೇಷಗಳನ್ನು ಸ್ಥಳೀಯರ ಗುಂಪು ತೆರವು ಮಾಡುತ್ತಿದ್ದಾಗ ಅವಶೇಷಗಳಡಿ ಇದ್ದ ಗ್ರೆನೆಡ್‌ ಮಾದರಿಯ ಸ್ಫೋಟಕ ಸ್ಪೋಟಗೊಂಡಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಘಟನೆಯಲ್ಲಿ ಒಬ್ಬರು ಸೇನಾಧಿಕಾರಿ, ಆರು ಮಕ್ಕಳು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಗಾಯಾಳುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ.

ಮೂವರು ಉಗ್ರರ ಹತ್ಯೆ:ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆಗಳ ಗುಂಡಿಗೆ ಮೂವರು ಶಂಕಿತ ಉಗ್ರರು ಬಲಿಯಾಗಿದ್ದಾರೆ.

ಒಬ್ಬ ಉಗ್ರನ ಗುರುತು ಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಲ್ಗಾಮ್‌ ಜಿಲ್ಲೆಯ ಕ್ವಾಜಿಗುಂಡ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಸೇನಾಪಡೆ, ಸಿಆರ್‌ಪಿಎಫ್‌ ಹಾಗೂ ಸ್ಥಳೀಯ ಪೊಲೀಸರು ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ನಂತರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.