ನವದೆಹಲಿ (ಪಿಟಿಐ): ಮುಂಬರುವ ಲೋಕಸಭಾ ಚುನಾವಣೆ ಪ್ರಕ್ರಿಯೆಯು ಏಪ್ರಿಲ್ ಎರಡನೇ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದ್ದು, ಮತದಾನ ಬಹುತೇಕ ಏಳು ಹಂತಗಳಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 7ರಿಂದ 10ರೊಳಗಿನ ಒಂದು ದಿನಾಂಕದಂದು ಮತದಾನ ಆರಂಭವಾಗಲಿದೆ ಎಂದಿರುವ ಚುನಾವಣಾ ಆಯೋಗದ ಮೂಲಗಳು, ವೇಳಾಪಟ್ಟಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ತಿಳಿಸಿವೆ. ದೇಶದಲ್ಲಿ ಒಟ್ಟು 81 ಕೋಟಿ ಮತದಾರರಿದ್ದು, ಏಳು ಹಂತಗಳಲ್ಲಿ ಮತದಾನ ನಡೆಸಲು ಈಗ ಚಿಂತನೆ ನಡೆಸಲಾಗಿದೆ. ಆದರೆ ಅದನ್ನು ಆರು ಹಂತಗಳಿಗೆ ಇಳಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ತಿಳಿದು ಬಂದಿದೆ.
2009ರ ಸಾರ್ವತ್ರಿಕ ಚುನಾವಣೆ ಏಪ್ರಿಲ್ 16ರಿಂದ ಮೇ 13ರವರೆಗೆ ಐದು ಹಂತಗಳಲ್ಲಿ ನಡೆದಿತ್ತು. ಈ ವಾರದ ಮಧ್ಯದಲ್ಲಿ ವೇಳಾಪಟ್ಟಿ ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದಲೇ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆ ಅನ್ವಯವಾಗಲಿದೆ.
ಬೇಸಿಗೆ ಧಗೆ ಚುನಾವಣೆ ಮೇಲೆ ಪರಿಣಾಮ ಬೀರದಂತೆ ಮತದಾನವನ್ನು ಬೇಗನೆ ನಡೆಸುವ ಅಥವಾ ಒಟ್ಟು ಚುನಾವಣಾ ಅವಧಿಯನ್ನು ಕಡಿಮೆಗೊಳಿಸುವ ರಾಜಕೀಯ ಪಕ್ಷಗಳ ಪ್ರಸ್ತಾವವನ್ನು ಆಯೋಗ ತಳ್ಳಿ ಹಾಕಿದೆ.
ಜೂನ್ 1ಕ್ಕೆ ಈ ಲೋಕಸಭೆಯ ಅವಧಿ ಮುಗಿಯಲಿದ್ದು, ಮೇ 31ರೊಳಗೆ ಹೊಸ ಲೋಕಸಭೆ ರಚನೆಯಾಗಬೇಕಿದೆ. ಒಡಿಶಾ, ಸಿಕ್ಕಿಂ, ಆಂಧ್ರ ಪ್ರದೇಶ ಮತ್ತು ಹೊಸದಾಗಿ ರಚನೆಯಾದ ತೆಲಂಗಾಣ ವಿಧಾನಸಭೆಗಳಿಗೂ ಲೋಕಸಭೆಯ ಜೊತೆಗೇ ಚುನಾವಣೆ ನಡೆಯಲಿದೆ. ಆದರೆ, ಆಂಧ್ರ ಪ್ರದೇಶ ವಿಭಜನೆಯಾಗಿರುವುದರಿಂದ ಹೊಸ ರಾಜ್ಯ ರಚನೆಯ ಹಲವು ಪ್ರಕ್ರಿಯೆಗಳು ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಹಾಗಾಗಿ ಇಲ್ಲಿ ಯಾವ ರೀತಿಯಲ್ಲಿ ಚುನಾವಣೆ ನಡೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ, ರಾಜ್ಯ ಸರ್ಕಾರಗಳು, ಅರೆ ಸೇನಾ ಪಡೆ ಮತ್ತು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳ ಜೊತೆಗಿನ ಸಮಾಲೋಚನೆಯೂ ಪೂರ್ಣಗೊಂಡಿದೆ. ವೇಳಾಪಟ್ಟಿಗೆ ಅಂತಿಮ ಸ್ಪರ್ಶ ನೀಡುವ ಕೆಲಸವೂ ನಡೆಯುತ್ತಿದೆ ಎನ್ನಲಾಗಿದೆ.
ಭ್ರಷ್ಟಾಚಾರದ ವಿರುದ್ಧ ಕೆಲವು ಸುಗ್ರೀವಾಜ್ಞೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತಿಸುತ್ತಿದ್ದು, ಅದಕ್ಕೆ ಅನುಕೂಲವಾಗುವ ರೀತಿಯಲ್ಲಿ ಚುನಾವಣಾ ಘೋಷಣೆ ಸ್ವಲ್ಪ ವಿಳಂಬವಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಆಯೋಗ ದೃಢಪಡಿಸಿಲ್ಲ. ಆರು ಅಥವಾ ಏಳು ಹಂತಗಳ ಮತದಾನ ವೇಳಾಪಟ್ಟಿಯೇ ಅಂತಿಮಗೊಂಡರೆ ಇದು ಈವರೆಗಿನ ಅತಿ ದೀರ್ಘ ಅವಧಿಯವರೆಗೆ ನಡೆಯಲಿರುವ ಚುನಾವಣೆಯಾಗಲಿದೆ.
ಮೊದಲ ಹಂತದಲ್ಲಿ ನಕ್ಸಲ್‌ಪೀಡಿತ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ. ಇದೇ ಮೊದಲ ಬಾರಿಗೆ ಕೆಲವು ಕ್ಷೇತ್ರಗಳಲ್ಲಿ ಪ್ರಯೋಗಾರ್ಥವಾಗಿ ಸರಿಯಾಗಿ ಮತ ಚಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸುವ ಅವಕಾಶವನ್ನು ಮತದಾರರಿಗೆ ನೀಡಲು ನಿರ್ಧರಿಸಲಾಗಿದೆ. ಅಕ್ರಮ ಮತದಾನ ತಡೆಯಲು ಇದು ನೆರವಾಗಲಿದೆ.
ಭರದ ಸಿದ್ಧತೆ: ಮತದಾನದ ಕೆಲಸಗಳಿಗಾಗಿ 1.1 ಕೋಟಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಭದ್ರತಾ ಸಿಬ್ಬಂದಿ. ಸೂಕ್ಷ್ಮ ಕ್ಷೇತ್ರಗಳಲ್ಲಿ ವೀಕ್ಷಕರಾಗಿ ಕೆಲಸ ಮಾಡಲು ಕೇಂದ್ರ ಸರ್ಕಾರದ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.
ದೇಶದಾದ್ಯಂತ ಎಂಟು ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 12 ಲಕ್ಷ ಮತಯಂತ್ರಗಳನ್ನು ಸಜ್ಜುಗೊಳಿಸುವ ಕೆಲಸ ನಡೆಯುತ್ತಿದೆ. ಹೊಸದಾಗಿ 2.5 ಲಕ್ಷ ಮತಯಂತ್ರಗಳನ್ನು ಪಡೆದುಕೊಳ್ಳುವ ಕೆಲಸವೂ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.