ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಇದೇ 21ರಿಂದ (ಸೋಮವಾರ) ಆರಂಭವಾಗಲಿದ್ದು, ಭೂಪರಂಪರೆಯ ತಾಣಗಳು ಮತ್ತು ಭೂ ಅವಶೇಷಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತ ಮಸೂದೆ ಸೇರಿದಂತೆ ಒಟ್ಟು ಎಂಟು ಮಸೂದೆಗಳು ಮಂಡನೆಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, ರಾಷ್ಟ್ರೀಯ ಉದ್ದೀಪನ ಔಷಧ ವಿರೋಧಿ ತಿದ್ದುಪಡಿ ಮಸೂದೆ, ಮಣಿಪುರ ಸರಕು ಮತ್ತು ಸೇವಾ ತಿದ್ದುಪಡಿ ಮಸೂದೆ, ಜನ ವಿಶ್ವಾಸ ತಿದ್ದುಪಡಿ ಮಸೂದೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ತಿದ್ದುಪಡಿ ಮಸೂದೆ ಮತ್ತು ತೆರಿಗೆ ಕಾನೂನುಗಳ ತಿದ್ದುಪಡಿ ಮಸೂದೆಗಳನ್ನು ಮಂಡನೆಯಾಗಲಿವೆ.
ಅಲ್ಲದೆ ಆದಾಯ ತೆರಿಗೆ ಮಸೂದೆಯನ್ನೂ (2025) ಸರ್ಕಾರ ಮಂಡಿಸುವ ಸಾಧ್ಯತೆಯಿದೆ. ಕಳೆದ ಅಧಿವೇಶನದಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಅದನ್ನು ಕೆಳಮನೆಯ ಆಯ್ಕೆ ಸಮಿತಿಗೆ ಉಲ್ಲೇಖಿಸಲಾಗಿತ್ತು. ಸಮಿತಿಯು ಆ ಕುರಿತ ವರದಿಯನ್ನು ಬುಧವಾರ ಅಂಗೀಕರಿಸಿದ್ದು, ಅದು ಲೋಕಸಭೆಯಲ್ಲಿ ಸೋಮವಾರ ಮಂಡನೆಯಾಗುವ ನಿರೀಕ್ಷೆಯಿದೆ.
ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ಇದೇ 21ರಂದು ಆರಂಭವಾಗಿ, ಆಗಸ್ಟ್ 21ಕ್ಕೆ ಕೊನೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.