ADVERTISEMENT

ದೆಹಲಿ ಪಾಲಿಕೆ ಮೇಯರ್ ಶೆಲ್ಲಿ ಒಬೆರಾಯ್‌ಉಪ ಮೇಯರ್‌ ಆಲೆ ಮೊಹಮ್ಮದ್‌ ಇಕ್ಬಾಲ್‌

ಪಿಟಿಐ
Published 22 ಫೆಬ್ರುವರಿ 2023, 14:28 IST
Last Updated 22 ಫೆಬ್ರುವರಿ 2023, 14:28 IST
ಆಲೇ ಮೊಹಮ್ಮದ್ ಇಕ್ಬಾಲ್
ಆಲೇ ಮೊಹಮ್ಮದ್ ಇಕ್ಬಾಲ್   

ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಮ್ ಆದ್ಮಿ ಪಕ್ಷದ (ಎಎಪಿ) ಶೆಲ್ಲಿ ಒಬೆರಾಯ್ ಮತ್ತು ಉಪಮೇಯರ್‌ ಆಗಿ ಆಲೆ ಮೊಹಮ್ಮದ್‌ ಇಕ್ಬಾಲ್‌ ಬುಧವಾರ ಆಯ್ಕೆಯಾದರು.

75 ದಿನಗಳ ಬಳಿಕ, ಸುಪ್ರೀಂ ಕೋರ್ಟ್‌ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಸುಸೂತ್ರವಾಗಿ ನಡೆಯಿತು. 12 ವರ್ಷಗಳ ನಂತರ ರಾಷ್ಟ್ರ ರಾಜಧಾನಿಯ ಮೇಯರ್‌ ಪಟ್ಟ ಮತ್ತೊಮ್ಮೆ ಮಹಿಳೆಗೆ ಒಲಿದಿದೆ. ರಜನಿ ಅಬ್ಬಿ 2011ರಲ್ಲಿ ಪಾಲಿಕೆ ಮೇಯರ್‌ ಆಗಿದ್ದೇ ಕೊನೆ.

ಶೆಲ್ಲಿ ಅವರು ಪ್ರತಿಸ್ಪರ್ಧಿ ಬಿಜೆಪಿಯ ರೇಖಾ ಗುಪ್ತಾ ಎದುರು 34 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಚಲಾವಣೆಯಾದ ಒಟ್ಟು 266 ಮತಗಳಲ್ಲಿ ಶೆಲ್ಲಿ ಅವರಿಗೆ 150 ಮತಗಳು ಮತ್ತು ರೇಖಾ ಅವರಿಗೆ 116 ಮತಗಳು ದೊರೆತವು.

ADVERTISEMENT

ಶೆಲ್ಲಿ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಐಜಿಎನ್‌ಒಯು) ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನಿಂದ (ಎಸ್‌ಒಎಂಎಸ್‌) ಪಿಎಚ್‌.ಡಿ ಪಡೆದಿದ್ದಾರೆ. ಭಾರತೀಯ ವಾಣಿಜ್ಯ ಸಂಘದ (ಐಸಿಎ) ಆಜೀವ ಸದಸ್ಯೆಯೂ ಹೌದು.

ಉಪ ಮೇಯರ್‌ ಆಗಿ ಆಯ್ಕೆಯಾದ ಆಲೆ ಮೊಹಮ್ಮದ್‌ ಇಕ್ಬಾಲ್‌ ಅವರು, ಬಿಜೆಪಿಯ ಕಮಲ್‌ ಬಾರ್ಗಿ ಎದುರು 31 ಮತಗಳ ಅಂತರದಿಂದ ಗೆಲುವು ಪಡೆದರು. ಇಕ್ಬಾಲ್‌ ಪರ 147 ಮತಗಳು, ಬಾರ್ಗಿ ಪರ 116 ಮತಗಳು ಚಲಾವಣೆಯಾದವು. ಸಿವಿಕ್‌ ಸೆಂಟರ್‌ನಲ್ಲಿ ಮತದಾನ ನಡೆಯಿತು.

ಪಾಲಿಕೆಗೆ ಚುನಾವಣೆ ನಡೆದ ನಂತರ ಮೊದಲ ಸಭೆಯಲ್ಲೇ ಮೇಯರ್ ಆಯ್ಕೆಯಾಗಬೇಕೆಂಬ ನಿಯಮವಿದೆ. ಆದರೆ, ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಬೇಕೆಂಬ ವಿಚಾರಕ್ಕೆ ಎಎಪಿ ಮತ್ತು ಬಿಜೆಪಿ ನಡುವೆ ಸಂಘರ್ಷ, ಗಲಾಟೆ ನಡೆದಿತ್ತು. ಇದರಿಂದ ಮೇಯರ್‌ ಚುನಾವಣೆ ಮೂರು ಬಾರಿ ಮುಂದೂಡಲ್ಪಟ್ಟಿತ್ತು. ಮೇಯರ್ ಆಯ್ಕೆ ಕಗ್ಗಂಟಾಗಿತ್ತು.

ಮೇಯರ್‌ ಚುನಾವಣೆ ಶೀಘ್ರ ನಡೆಸಲು ನಿರ್ದೇಶನ ಕೋರಿ ಎಎಪಿಯ ಮೇಯರ್‌ ಅಭ್ಯರ್ಥಿ ಶೆಲ್ಲಿ ಒಬೆರಾಯ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ತಕ್ಷಣ ಮೇಯರ್‌ ಚುನಾವಣೆ ನಡೆಸುವಂತೆ ಫೆ.17ರಂದು ಆದೇಶ ನೀಡಿತ್ತು.

ಪಾಲಿಕೆಯ ಮುಂದಿನ ಸಭೆ ಕರೆದ 24 ಗಂಟೆಗಳ ಒಳಗೆ ಮೇಯರ್‌ ಮತ್ತು ಉಪ ಮೇಯರ್‌ ಹಾಗೂ ಸ್ಥಾಯಿ ಸಮಿತಿಗಳಿಗೆ ಚುನಾವಣೆ ದಿನಾಂಕ ನಿಗದಿಪಡಿಸಿ, ನೋಟಿಸ್ ನೀಡುವಂತೆ ಪೀಠವು ಆದೇಶದಲ್ಲಿ ಸೂಚಿಸಿತ್ತು. ಜತೆಗೆ ಪಾಲಿಕೆಯ ನಾಮನಿರ್ದೇಶಿತ ಸದಸ್ಯರು ಮೇಯರ್‌ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ ಎಂದೂ ಆದೇಶಿಸಿ, ದೆಹಲಿ ಲೆಪ್ಟಿನೆಂಟ್‌ ಗವರ್ನರ್‌ ಅವರ ನಿಲುವನ್ತು ಪೀಠ ಎತ್ತಿಹಿಡಿದಿತ್ತು.

ಮುಂದಿನ 3 ತಿಂಗಳು ಭೂಭರ್ತಿ ಸ್ಥಳಗಳ ಪರಿಶೀಲನೆ ನಡೆಯಲಿದೆ. ಜನರ ಆಶೋತ್ತರ ಮತ್ತು ಅವರಿಗೆ ನೀಡಿರುವ ಹತ್ತು ಭರವಸೆ ಈಡೇರಿಸಲು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ

–ಶೆಲ್ಲಿ ಒಬೆರಾಯ್‌, ಮೇಯರ್‌, ದೆಹಲಿ ಮಹಾನಗರ ಪಾಲಿಕೆ

ಗೂಂಡಾಗಳಿಗೆ ಸೋಲಾಗಿದೆ. ಜನರಿಗೆ ಗೆಲುವು ಸಿಕ್ಕಿದೆ. ದೆಹಲಿ ಮಹಾನಗರ ಪಾಲಿಕೆಯಲ್ಲಿ ದೆಹಲಿಯ ಜನರು ಗೆದ್ದರು. ಗೂಂಡಾಗಿರಿ ಮಣಿಸಿದರು

- ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.