ನವದೆಹಲಿ: ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ್ದಕ್ಕಾಗಿ ವಕೀಲರಿಗೆ ನೇರವಾಗಿ ಸಮನ್ಸ್ ಜಾರಿ ಮಾಡುವುದಕ್ಕೆ ಪೊಲೀಸರು ಅಥವಾ ತನಿಖಾ ಸಂಸ್ಥೆಗಳಿಗೆ ಅನುಮತಿ ನೀಡುವುದರಿಂದ ನ್ಯಾಯಾಡಳಿತ ವ್ಯವಸ್ಥೆಗೆ ಬೆದರಿಕೆ ಒಡ್ಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ವಕೀಲ ವೃತ್ತಿಯು ನ್ಯಾಯದಾನ ವ್ಯವಸ್ಥೆಯ ಅವಿಭಾಜ್ಯ ಘಟಕ. ಆದರೆ, ವಕೀಲರಿಗೆ ಹೀಗೆ ನೇರವಾಗಿ ಸಮನ್ಸ್ ನೀಡುವ ಕ್ರಮವು ಈ ವೃತ್ತಿಯ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಮೂರ್ತಿಗಳಾದ ಕೆ.ವಿ.ವಿಶ್ವನಾಥನ್ ಹಾಗೂ ಎನ್.ಕೋಟಿಶ್ವರ್ ಸಿಂಗ್ ಅವರು ಇದ್ದ ನ್ಯಾಯಪೀಠ ಹೇಳಿದೆ.
ತನ್ನ ಕಕ್ಷಿದಾರರ ವಿರುದ್ಧದ ಪ್ರಕರಣದ ವಕಾಲತ್ತು ವಹಿಸಿದ್ದ ಗುಜರಾತಿನ ವಕೀಲರೊಬ್ಬರಿಗೆ ಪೊಲೀಸರು ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ವಕೀಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್, ಅವರಿಗೆ ನೀಡಿದ್ದ ನೋಟಿಸ್ ರದ್ದುಗೊಳಿಸಲು ನಿರಾಕರಿಸಿ ಮಾರ್ಚ್‌ನಲ್ಲಿ ಆದೇಶಿಸಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ, ವಕೀಲ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಮುಂದಿನ ಆದೇಶದವರೆಗೆ ಅರ್ಜಿದಾರನಿಗೆ ಯಾವುದೇ ಸಮನ್ಸ್ ನೀಡಬಾರದು ಎಂದು ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ.
ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವು ನೀಡುವಂತೆ, ಭಾರತ ವಕೀಲರ ಪರಿಷತ್ತು, ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸುವ ವಕೀಲರ ಸಂಘದ (ಎಸ್‌ಸಿಎಒಆರ್‌ಎ) ಅಧ್ಯಕ್ಷರು, ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು.
ಜೊತೆಗೆ, ಸೂಕ್ತ ನಿರ್ದೇಶನ ನೀಡುವುದಕ್ಕಾಗಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಣ್ನು ಸಿಜೆಐ ಅವರ ಮುಂದೆ ಮಂಡಿಸುವಂತೆಯೂ ನ್ಯಾಯಪೀಠ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.