ADVERTISEMENT

ಫ್ಯೂಚರ್‌–ರಿಲಯನ್ಸ್‌ ವಿಲೀನ ಪ್ರಕರಣ: ಹೈಕೋರ್ಟ್‌ ಆದೇಶ ತಳ್ಳಿ ಹಾಕಿದ ‘ಸುಪ್ರೀಂ’

ಪಿಟಿಐ
Published 1 ಫೆಬ್ರುವರಿ 2022, 14:57 IST
Last Updated 1 ಫೆಬ್ರುವರಿ 2022, 14:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಫ್ಯೂಚರ್‌ ರಿಟೇಲ್‌ ಸಂಸ್ಥೆಯನ್ನು ರಿಯಲನ್ಸ್‌ ರಿಟೇಲ್‌ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಒಪ್ಪಂದ ಮುಂದುವರಿಸುವುದನ್ನು ತಡೆಯುವ ದೆಹಲಿ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಪಡಿಸಿದೆ.

ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್‌ ನಿರಾಕರಿಸಿದ್ದರಿಂದ ಈ ಪ್ರಕರಣ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ರಿಲಯನ್ಸ್ ರಿಟೇಲ್ ಜೊತೆಗಿನ ವಿಲೀನ ಒಪ್ಪಂದದ ಮಧ್ಯಸ್ಥಿಕೆ ನ್ಯಾಯಮಂಡಳಿ ತೀರ್ಪಿಗೆ ಸಂಬಂಧಿಸಿದ ಫ್ಯೂಚರ್ ಗ್ರೂಪ್ ಸಂಸ್ಥೆಗಳ ಮನವಿಯನ್ನು ದೆಹಲಿ ಹೈಕೋರ್ಟ್‌ಗೆ ಹಿಂತಿರುಗಿಸಿತು.

ADVERTISEMENT

‘ನಾವು 2021ರ ಫೆಬ್ರುವರಿ 2, ಮಾರ್ಚ್‌ 18 ಮತ್ತು ಅಕ್ಟೋಬರ್‌ 29ರ ಫ್ಯೂಚರ್‌ ಸಂಸ್ಥೆಗೆ ಸಂಬಂಧಿಸಿದ ದೆಹಲಿ ಹೈಕೋರ್ಟ್‌ ಆದೇಶಗಳನ್ನು ತಿರಸ್ಕರಿಸಿದ್ದೇವೆ. ಹೈಕೋರ್ಟ್‌ನ ಒಬ್ಬ ಪ್ರಮುಖ ನ್ಯಾಯಮೂರ್ತಿಯವರು ಸಮಸ್ಯೆಯನ್ನು ಅವಲೋಕಿಸಿ ಸೂಕ್ತ ಆದೇಶ ನೀಡುವಂತೆ ನಿರ್ದೇಶನ ನೀಡುತ್ತೇವೆ’ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ತ್ವರಿತ ವಿಚಾರಣೆಗೆ ಪೀಠವೊಂದನ್ನು ರಚಿಸುವಂತೆ ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ನಾವು ಮನವಿ ಮಾಡುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.