ADVERTISEMENT

ಆ್ಯಪ್‌ ಆಧಾರಿತ ಸಾಲ ಹಾಗೂ ಕಿರುಕುಳ: ಇಬ್ಬರು ಚೀನಿಯರು ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 16:10 IST
Last Updated 31 ಜನವರಿ 2021, 16:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್: ಆ್ಯಪ್‌ ಆಧಾರಿತ ಸಾಲ ಹಾಗೂ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಪೊಲೀಸರು, ಬೆಂಗಳೂರಿನ ಕೋರಮಂಗಲದಲ್ಲಿ ಎರಡು ಸಂಸ್ಥೆಗಳಿಗೆ ಸೇರಿದ ನಾಲ್ವರು ಹಿರಿಯ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ವಾಟರ್‌ ಎಲಿಫೆಂಟ್ ಫೈನಾನ್ಷಿಯಲ್‌ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ನಿರಂಜನ್ ಉಮಾಪತಿ, ಉಷಾ ಬಿ.ಎಂ., ಬೆಡ್‌ ವ್ಯಾಲೆಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್‌ನ ಯೆಶಿ ಗ್ಯಾಟ್ಸೊ ಮತ್ತು ಮತ್ತೊಬ್ಬ ಹಿರಿಯ ಅಧಿಕಾರಿ ಯಿಚಕ್ ದೊಂಡುಪ್ ಅವರನ್ನು ಬಂಧಿಸಲಾಗಿದೆ. ಇವರು ಆನ್‌ಲೈನ್‌ ಮೂಲಕ ಕ್ಷಿಪ್ರ ಸಾಲ ನೀಡುತ್ತಿದ್ದು, ಸುಸ್ತಿದಾರರಿಂದ ಸಾಲ ವಸೂಲಾತಿಗೆ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಾಟರ್‌ ಎಲಿಫೆಂಟ್ ಮತ್ತು ಬೆಡ್ ವ್ಯಾಲೆಟ್‌ ಟೆಕ್ನಾಲಜಿಸ್ ಕಂಪನಿಯ ಸಿಇಒ, ಹಾಗೂ ಉಪಾಧ್ಯಕ್ಷರಾದ ಚೀನಾದ ಚೀನ್‌ ವು ಮತ್ತು ಆ್ಯಂಡಿ ಲು ವೆಂಜೀ ಅವರು ತಲೆಮರೆಸಿಕೊಂಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

ಜಂಟಿ ಪೊಲೀಸ್ ಆಯುಕ್ತ ಅವಿನಾಶ್ ಮೊಹಂತಿ ಅವರು, ‘ಇವರು ಫ್ಲಾಶ್‌ ರೂಪಿ, ರೇಥಿಯೊನ್ ಲೋನ್, ಎಲಿಫೆಂಟ್ ಲೋನ್, ಸ್ಮೈಲ್ ಲೋನ್, ವುಲ್ಕನ್ ಲೋನ್, ಶುಭ್‌ಕ್ಯಾಶ್, ಫ್ರಿಗ್‌ಲೋನ್, ಲೋಕಿಲೋನ್, ಟೈಗರ್ ಕ್ಯಾಷ್, ಕ್ಯಾಷ್‌ಬುಲ್‌, ಮಾರ್ಸ್‌ಲೋನ್ ಹೆಸರಿನಲ್ಲಿ ಸಾಲ ನೀಡುತ್ತಿದ್ದರು’ ಎಂದರು.

‘ವಾಟರ್‌ ಎಲಿಫೆಂಟ್ ಫೈನಾನ್ಸಿಯಲ್ ಸರ್ವೀಸಸ್‌ ಮತ್ತು ಬೆಡ್‌ವ್ಯಾಲೆಟ್ ಟೆಕ್ನಾಲಜಿಸ್ ಹೆಸರಿನಲ್ಲಿ ಕೋರಮಂಗಲದಲ್ಲಿ ಕಾಲ್ ಸೆಂಟರ್ ನಡೆಸುತ್ತಿದ್ದರು. ಇಲ್ಲಿ 200 ಮಂದಿ ಟೆಲಿ ಕಾಲರ್ ಆಗಿ ಕೆಲಸ ಮಾಡುತ್ತಿದ್ದರು. ಸುಸ್ತಿದಾರರಿಗೆ ಆ್ಯಪ್ ಮೂಲಕ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ತಿಳಿಸಿದರು.

ಹೈದರಾಬಾದ್ ಮೂಲದ ಟೆಲಿಕಾಲರ್ ಸಂಸ್ಥೆ, ಹಣಕಾಸು ಸಂಸ್ಥೆ ಮೇಲೆ ನಡೆದಿದ್ದ ದಾಳಿಯ ಮುಂದುವರಿದ ಭಾಗವಾಗಿ ಈ ಬಂಧವಾಗಿದೆ. ಹೈದರಾಬಾದ್, ದೆಹಲಿ, ಬೆಂಗಳೂರಿನಲ್ಲಿ ದಾಳಿ ನಡೆದಿದ್ದು, ಚೀನಿಯರು ಸೇರಿದಂತೆ 20 ಪ್ರತಿನಿಧಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಹೈದರಾಬಾದ್, ಸೈಬರಾಬಾದ್, ರಾಚಕೊಂಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಈ ಸಂಬಂಧ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.