ADVERTISEMENT

ಟ್ಯಾಂಕ್‌ ಪ್ರತಿಬಂಧಕ ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆ ಯಶಸ್ವಿ

ಪಿಟಿಐ
Published 14 ಏಪ್ರಿಲ್ 2024, 14:40 IST
Last Updated 14 ಏಪ್ರಿಲ್ 2024, 14:40 IST
   

ನವದೆಹಲಿ: ‘ಗುರಿ ನಿರ್ದೇಶಿತ ಟ್ಯಾಂಕ್‌ ಪ್ರತಿಬಂಧಕ ಕ್ಷಿಪಣಿ ವ್ಯವಸ್ಥೆ’ಯ (ಎಂಪಿಎಟಿಜಿಎಂ) ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ಸೇನೆ ಯಶಸ್ವಿಯಾಗಿ ನಡೆಸಿದೆ.

‘ಸಿಡಿತಲೆಗಳನ್ನು ಹೊತ್ತ ಕ್ಷಿಪಣಿ ವ್ಯವಸ್ಥೆಯ ಪ್ರಯೋಗವನ್ನು ಪೋಖ್ರಾನ್‌ನಲ್ಲಿರುವ ಪರೀಕ್ಷಾ ವಲಯದಲ್ಲಿ ಏಪ್ರಿಲ್‌ 13ರಂದು ಯಶಸ್ವಿಯಾಗಿ ನೆರವೇರಿಸಲಾಗಿದೆ. ಕ್ಷಿಪಣಿ ಹಾಗೂ ಸಿಡಿತಲೆಗಳ ಕಾರ್ಯ ನಿರ್ವಹಣೆ ಗಮನಾರ್ಹವಾಗಿತ್ತು’ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

‘ಈ ಕ್ಷಿಪಣಿ ವ್ಯವಸ್ಥೆಯು ಹಗಲು ಮತ್ತು ರಾತ್ರಿ ವೇಳೆ ನಡೆಸುವ ಕಾರ್ಯಾಚರಣೆಯಲ್ಲಿ ಬಳಸಬಹುದಾಗಿದೆ’ ಎಂದೂ ತಿಳಿಸಿದೆ.

ADVERTISEMENT

ಈ ಕ್ಷಿಪಣಿ ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಇದು ಎಂಪಿಎಟಿಜಿಎಂ, ಉಡ್ಡಯನ ಉಪಕರಣಗಳು, ನಾಶ ಮಾಡಲಾಗಿರುವ ಟ್ಯಾಂಕ್‌ ಅನ್ನು ಪತ್ತೆ ಮಾಡುವ ಸಾಧನ ಹಾಗೂ ಬೆಂಕಿಯನ್ನು ನಿಯಂತ್ರಿಸುವ ಘಟಕವನ್ನು ಒಳಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿರುವುದರಿಂದ, ದೇಶೀಯವಾಗಿ ಸಿದ್ಧಪಡಿಸಲಾಗಿರುವ ಈ ಟ್ಯಾಂಕ್‌ ಪ್ರತಿಬಂಧಕ ರಕ್ಷಣಾ ವ್ಯವಸ್ಥೆಯನ್ನು ಸೇನೆಗೆ ಸೇರ್ಪಡೆ ಮಾಡುವ ಹಾದಿ ಸುಗಮವಾದಂತಾಗಿದೆ.

ಕ್ಷಿಪಣಿ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಡಿಆರ್‌ಡಿಒ ಹಾಗೂ ಸೇನೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿನಂದಿಸಿದ್ದಾರೆ.

‘ಅತ್ಯಾಧುನಿಕ ತಂತ್ರಜ್ಞಾನ ಆಧರಿತ ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಪರೀಕ್ಷೆ ಮಹತ್ವದ ಹೆಜ್ಜೆಯಾಗಿದೆ’ ಎಂದು ಅವರು ಬಣ್ಣಿಸಿದ್ದಾರೆ.

ಡಿಆರ್‌ಡಿಒ ಮುಖ್ಯಸ್ಥ ಸಮೀರ್‌ ವಿ.ಕಾಮತ್‌ ಅವರು ಕೂಡ, ಪರೀಕ್ಷೆ ನೆರವೇರಿಸಿದ ತಂಡವನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.