ADVERTISEMENT

ಆರ್ಟಿಕಲ್ 370 ರದ್ದು-ಪ್ರೀತಿಯಲ್ಲಿದ್ದ ಎರಡು ಕಾಶ್ಮೀರಿ ಜೋಡಿಗಳ ಸ್ಥಿತಿ ಅತಂತ್ರ

ಆರ್ಟಿಕಲ್ 370 ರದ್ದಾದ ನಂತರದ ಬೆಳವಣಿಗೆ

ಏಜೆನ್ಸೀಸ್
Published 30 ಆಗಸ್ಟ್ 2019, 12:11 IST
Last Updated 30 ಆಗಸ್ಟ್ 2019, 12:11 IST
   

ಬಿಹಾರ: ಕೇಂದ್ರ ಸರ್ಕಾರ ಕಾಶ್ಮೀರದಲ್ಲಿ ಅನುಚ್ಛೇದ 370 ರದ್ದು ಮಾಡಿದ ತಕ್ಷಣ ಭಾರತದ ಇತರ ರಾಜ್ಯಗಳಂತೆಯೇ ಎಲ್ಲಾ ಕಾನೂನುಗಳು ಕಾಶ್ಮೀರದಲ್ಲಿಯೂ ಜಾರಿಯಲ್ಲಿವೆ. ಪರಿಣಾಮ ಈಗ ಕಾಶ್ಮೀರದಲ್ಲಿ ಪ್ರೀತಿ, ಪ್ರೇಮದಲ್ಲಿ ಮುಳುಗಿ ಹೋಗಿದ್ದ ಎರಡು ಜೋಡಿ ಬೇರೆ ಬೇರೆಯಾಗುವ ಸ್ಥಿತಿ ನಿರ್ಮಾಣವಾಗಿದೆ.

ಕಾಶ್ಮೀರದಲ್ಲಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿದ ಆರೋಪದ ಅಡಿಯಲ್ಲಿ ಬಿಹಾರದ ಇಬ್ಬರು ಯುವಕರನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಸುಪೋಲ್ ಜಿಲ್ಲೆ ರಾಘೋಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಭಿಷಣ್ ಪುರ್ ಗ್ರಾಮದ ಮಹಮದ್ ತಬ್ರೇಜ್ (26) ಹಾಗೂ ಮಹಮದ್ ಪರ್ವೇಜ್ (24) ಬಂಧಿತರು. ಆರೋಪಿಗಳ ವಿರುದ್ಧ ಬಾಲಕಿಯರ ತಂದೆ ಕಾಶ್ಮೀರ ಪೊಲೀಸರಿಗೆ ದೂರು ನೀಡಿ ನನ್ನ ಹೆಣ್ಣು ಮಕ್ಕಳನ್ನು ಇಬ್ಬರು ಯುವಕರು ಅಪಹರಿಸಿಕೊಂಡು ಹೋಗಿರುವುದಾಗಿ ಆರೋಪಿಸಿದ್ದಾರೆ.

ಅನುಚ್ಛೇದ 370 ಜಾರಿಯಲ್ಲಿದ್ದ ವೇಳೆ ಕಾಶ್ಮೀರದ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಹೊರರಾಜ್ಯದ ಯುವಕರು ಮದುವೆಯಾಗುತ್ತಿದ್ದರು. ಆಗ ಬಾಲ್ಯ ವಿವಾಹ ಕಾಯ್ದೆ ಅಲ್ಲಿ ಯಾವುದೇ ಪ್ರಯೋಜನವಿಲ್ಲದಂತಾಗಿತ್ತು. ಅನುಚ್ಛೇದ 370 ರದ್ದಾದಹಿನ್ನೆಲೆಯಲ್ಲಿ ಕೇಂದ್ರದ ಎಲ್ಲಾ ಕಾನೂನುಗಳು ಕಾಶ್ಮೀರದಲ್ಲಿ ಜಾರಿಗೆ ಬಂದವು. ಪರಿಣಾಮ ಅಪಹರಣದ ದೂರು ನೀಡುತ್ತಿದ್ದಂತೆ ಕಾಶ್ಮೀರದ ಪೊಲೀಸರ ತಂಡ ಬಿಹಾರ ರಾಜ್ಯಕ್ಕೆ ಆಗಮಿಸಿ ಅಲ್ಲಿನ ಸುಪೋಲ್ ಜಿಲ್ಲಾ ಪೊಲೀಸರ ನೆರವಿನಿಂದ ಆರೋಪಿಗಳನ್ನು ಬಂಧಿಸಿದ್ದಾರೆ.

ADVERTISEMENT

ಆರೋಪಿಗಳ ಇರಿಸಿಕೊಂಡಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ ಪೊಲೀಸರು ನಂತರ ಆರೋಪಿಗಳನ್ನು ಸುಪೋಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಬಾಲಕಿಯರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದು, ನಾವು ಅಪ್ರಾಪ್ತರಾಗಿದ್ದು ಸ್ವಇಚ್ಛೆಯಿಂದ ಇವರನ್ನು ವಿವಾಹವಾಗಿ ಬಂದಿದ್ದೇವೆಯೇ ಹೊರತು ನಮ್ಮನ್ನು ಯಾರೂ ಅಪಹರಿಸಿಲ್ಲ. ಯಾರದ್ದೇ ಒತ್ತಡ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.ನ್ಯಾಯಾಧೀಶರು ಇಬ್ಬರು ಬಾಲಕಿಯರು ಹಾಗೂ ಆರೋಪಿಗಳ ಹೇಳಿಕೆ ದಾಖಲಿಸಿಕೊಂಡು ಕಾಶ್ಮೀರ ಪೊಲೀಸರ ವಶಕ್ಕೆ ನೀಡಿ ಮುಂದಿನ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಕಾನೂನಿನಂತೆ ಬಾಲಕಿಯರ ಸ್ವಇಚ್ಛೆಯಂತೆ ತಂದೆಯ ಮನೆ ಅಥವಾ ಸರ್ಕಾರಿ ಬಾಲಮಂದಿರದಲ್ಲಿ ಇರಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಇಬ್ಬರು ಆರೋಪಿಗಳು ಮಾತ್ರ ಕಾನೂನ ಕ್ರಮ ಎದುರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಲಿಕೆಲಸಕ್ಕೆ ಹೋದವರು ಪ್ರೀತಿಯಲ್ಲಿ ಬಿದ್ದರು

ಆರೋಪಿಗಳ ಕುಟುಂಬದ ಮೂಲಗಳ ಪ್ರಕಾರ, ಇಬ್ಬರು ಸೋದರರು ಕೂಲಿ ಕೆಲಸ ಮಾಡಲೆಂದು ಕಾಶ್ಮೀರದ ರಾಂಬನ್ ಜಿಲ್ಲೆಯ ನಗ್ಮಾ ಬನಿಹಾನ್ ಗ್ರಾಮಕ್ಕೆ ತೆರಳಿದ್ದರು. ಆ ಸಮಯದಲ್ಲಿ ಕಾಶ್ಮೀರ ಯುವತಿಯರನ್ನು ಪ್ರೀತಿಸಿದರು. ನಂತರ ಡೇಟಿಂಗ್ ಆರಂಭಿಸಿದ್ದಾರೆ. ಪ್ರೀತಿ ಮದುವೆಯಲ್ಲಿ ಅಂತ್ಯಗೊಂಡಿದೆ. ಈ ನಡುವೆ ಕಾಶ್ಮೀರದಲ್ಲಿ ಅನುಚ್ಛೇದ 370 ಘೋಷಣೆಯಾಗಿದೆ. ಬಾಲಕಿಯರ ತಂದೆ ಎಚ್ಚೆತ್ತುಕೊಂಡು ಕೂಡಲೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ತಬ್ರೇಜ್ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬೆಳವಣಿಗೆಗಳಿಂದ ಕಾಶ್ಮೀರದ ಯುವತಿಯರನ್ನು ಭಾರತದ ಯಾವ ರಾಜ್ಯದವರಾದರೂ ವಿವಾಹವಾಗಿ ಕಾಶ್ಮೀರದಲ್ಲಿ ನೆಲೆಸಬಹುದು ಎಂಬುದು ನಮಗೆ ಅರ್ಥವಾಗಿದೆ. ಈ ಪ್ರಕರಣ ಎಲ್ಲಾ ಮುಗಿದ ನಂತರ ಇಸ್ಲಾಂ ಕಾನೂನಿನಂತೆ ಕಾಶ್ಮೀರದಲ್ಲಿಯೇ ನಿಖಾ ಮಾಡಿಕೊಳ್ಳುವುದಾಗಿ ತಿಳಿಸಿದ್ದಾನೆ.

ಕಾಶ್ಮೀರದಲ್ಲಿ ಅನುಚ್ಛೇದ 370 ತೆಗೆದುಹಾಕಿದ್ದರಿಂದ ನಮ್ಮ ಮದುವೆಗೇನೂ ತೊಂದರೆ ಇಲ್ಲ. ನಾವು ಇನ್ನೂ ಮೂರು ವರ್ಷ ಕಾದು ನಮ್ಮ ನಮ್ಮ ಗಂಡನ ಜೊತೆ ನಾವು ಸಂತೋಷದಿಂದ ಇರುತ್ತೇವೆ. ನಾವು ಅವರನ್ನು ಪ್ರೀತಿಸುತ್ತೇವೆ ಎಂದು ಇಬ್ಬರು ಅಪ್ರಾಪ್ತ ಬಾಲಕಿಯರು ನ್ಯಾಯಾಧೀಶರ ಮುಂದೆಯೇ ಹೇಳಿಕೆ ನೀಡಿದ್ದಾರೆ.

ವಿಷಯ ನ್ಯಾಯಾಲಯದ ಮುಂದಿದೆ. ನಾವು ನಾಲ್ಕು ಮಂದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ. ನ್ಯಾಯಾಲಯ ಏನು ತೀರ್ಮಾನಕೈಗೊಳ್ಳುತ್ತದೆಯೋ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

18 ವರ್ಷ ತುಂಬಿರದ ಹೆಣ್ಣು ಮಕ್ಕಳನ್ನು ವಿವಾಹವಾಗುವುದು ಅಪರಾಧ. ಇದು ಭಾರತದಲ್ಲಿ ಚಾಲ್ತಿಯಲ್ಲಿರುವ ಕಠಿಣ ಕಾನೂನು. ಇದನ್ನು ಉಲ್ಲಂಘಿಸಿ ಮದುವೆಯಾದರೆ, ಅವರ ವಿರುದ್ಧ ಅತ್ಯಾಚಾರ, ಅಪಹರಣ ಸೇರಿದಂತೆ ಹಲವು ಕಾಯ್ದೆಗಳ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.