ಹರ್ದೋಯ್: ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಎರಡು ರೈಲುಗಳನ್ನು ಹಳಿತಪ್ಪಿಸುವ ಯತ್ನವನ್ನು ಲೋಕೊ ಪೈಲಟ್‌ಗಳ ಜಾಗರೂಕತೆಯಿಂದಾಗಿ ವಿಫಲಗೊಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.
ಸೋಮವಾರ ಸಂಜೆ, ದಲೇಲ್‌ನಗರ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವಿನ ಕಿ.ಮೀ ಮಾರ್ಕರ್ 1129/14 ಬಳಿ ದುಷ್ಕರ್ಮಿಗಳು ಮರದ ದಿಮ್ಮಿಗಳನ್ನು ಅರ್ಥಿಂಗ್ ವೈರ್ ಬಳಸಿ ಹಳಿಗೆ ಕಟ್ಟಿದ್ದರು ಎಂದು ಅವರು ಹೇಳಿದ್ದಾರೆ.
ಲಖನೌ ಕಡೆಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ (20504) ನ ಲೋಕೋ ಪೈಲಟ್ ಅಡಚಣೆಯನ್ನು ಗಮನಿಸಿದ ನಂತರ ತುರ್ತು ಬ್ರೇಕ್ ಹಾಕಿದರು. ಮರದ ದಿಮ್ಮಿ ತೆರವು ಮಾಡಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ಎಕ್ಸ್‌ಪ್ರೆಸ್ ಬಳಿಕ ಕಠ್ಗೋಡಮ್ ಎಕ್ಸ್‌ಪ್ರೆಸ್ (15044) ಅನ್ನು ಹಳಿತಪ್ಪಿಸಲು ಎರಡನೇ ಪ್ರಯತ್ನ ಮಾಡಲಾಗಿದೆ. ಲೋಕೊ ಪೈಲಟ್‌ನ ಅರಿವಿನಿಂದ ಅದನ್ನು ತಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಸೂಪರಿಂಟೆಂಡೆಂಟ್ ನೀರಜ್ ಕುಮಾರ್ ಜದೌನ್ ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ರೈಲ್ವೆ ಪೊಲೀಸ್, ರೈಲ್ವೆ ರಕ್ಷಣಾ ಪಡೆ ಮತ್ತು ಸ್ಥಳೀಯ ಪೊಲೀಸರ ತಂಡಗಳು ಘಟನೆಗಳ ತನಿಖೆ ನಡೆಸುತ್ತಿವೆ ಎಂದು ಅವರು ದೃಢಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.