ADVERTISEMENT

UP Poll 2022: ಜಯಂತ್ ವಿರುದ್ಧ ವಾಗ್ದಾಳಿ: ಬಿಜೆಪಿಗೆ ಹಿನ್ನಡೆ?

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಜಾಟ್‌ ಸಮುದಾಯದ ಬೆಂಬಲ ಕೈತಪ್ಪುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 17:37 IST
Last Updated 5 ಫೆಬ್ರುವರಿ 2022, 17:37 IST
ಜಯಂತ್ ಚೌಧರಿ
ಜಯಂತ್ ಚೌಧರಿ   

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಪಕ್ಷದ ಮುಖ್ಯಸ್ಥ ಜಯಂತ್ ಚೌಧರಿ ಅವರ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವುದು ಜಾಟ್ ಸಮುದಾಯದ ಪ್ರಾಬಲ್ಯವಿರುವ ರಾಜ್ಯದ ಪಶ್ಚಿಮ ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ತರುವ ಸಾಧ್ಯತೆಯಿದೆ. ಈ ಭಾಗದಲ್ಲಿ ಫೆ. 10 ಹಾಗೂ 14ರಂದು ಮತದಾನ ನಡೆಯಲಿದೆ.

ಶನಿವಾರ ಮಥುರಾದಲ್ಲಿ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಜಯಂತ್, ‘ಆದಿತ್ಯನಾಥ ಅವರು ನನ್ನನ್ನು ಗೂಂಡಾ ಮತ್ತು ಗಲಭೆಕೋರ ಎಂದು ಕರೆಯುವ ಮೂಲಕ ನನ್ನನ್ನು ಬಲಿಪಶು ಮಾಡುತ್ತಿದ್ದಾರೆ. ಬಾಬಾ (ಆದಿತ್ಯನಾಥ) ಅವರು ನನ್ನನ್ನು ಗೂಂಡಾ ಎಂದು ಪರಿಗಣಿಸಿದ್ದಾರೆ. ಆದರೆ, ನನ್ನ ತಾತ ಚೌಧರಿ ಚರಣ್ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಗೂಂಡಾ ಕಾಯ್ದೆ ಜಾರಿಗೆ ಬಂದಿತ್ತು ಎಂಬುದನ್ನು ನಾನು ಆದಿತ್ಯನಾಥ ಅವರಿಗೆ ನೆನಪಿಸ ಬಯಸುತ್ತೇನೆ’ ಎಂದು ಜಯಂತ್ ತಿರುಗೇಟು ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಬಾಗ್‌ಪತ್‌ನಲ್ಲಿ ಜನರೊಂದಿಗೆ ಸಂವಾದದ ಸಂದರ್ಭದಲ್ಲಿ, ‘ಈ ಇಬ್ಬರು ಹುಡುಗರು ರಾಜ್ಯದಲ್ಲಿ ಗಲಭೆಗಳಿಗೆ ಕೈಜೋಡಿಸಿದ್ದಾರೆ’ ಎಂಬ ಆದಿತ್ಯನಾಥ ಅವರ ಟೀಕೆಗಳಿಗೆ ಜಯಂತ್ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ADVERTISEMENT

ತಾವು ಮಥುರಾ ಲೋಕಸಭಾ ಕ್ಷೇತ್ರದ ಸಂಸದನಾಗಿದ್ದಾಗ ಯಾವುದೇ ಕೋಮು ಘರ್ಷಣೆಗಳು ನಡೆದಿರಲಿಲ್ಲ ಎಂದು ಚುನಾವಣಾ ರ್‍ಯಾಲಿಗಳಲ್ಲಿ ಅವರು ಹೇಳಿದ್ದರು.

ಜಯಂತ್ ಅವರ ಕುರಿತು ಯೋಗಿ ಆದಿತ್ಯನಾಥ ಅವರು ಮಾತನಾಡುತ್ತಿರುವ ರೀತಿಗೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತನಾಡುತ್ತಿರುವ ರೀತಿಗೂ ವ್ಯತ್ಯಾಸವಿದೆ. ಶಾ ಅವರು ಜಯಂತ್ ಅವರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುವ ಹಾಗೆ ತೋರುತ್ತಿದ್ದಾರೆ. ರಾಜ್ಯದ ಪಶ್ಚಿಮ ಭಾಗದಲ್ಲಿ ಚುನಾವಣಾ ಸಭೆಗಳಲ್ಲಿ ಅವರ ಮೇಲೆ ಟೀಕಾಪ್ರಹಾರಕ್ಕೆ ಇಳಿದಿಲ್ಲ.

ಜಾಟ್ ನಾಡಿನಲ್ಲಿ ಜಯಂತ್ ವಿರುದ್ಧ ವಾಗ್ದಾಳಿಗೆ ಇಳಿಯುವುದು ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜಾಟ್ ಸಮುದಾಯದ ಪ್ರಬಲ ನಾಯಕರೆನಿಸಿರುವ ಜಯಂತ್, ಸಮುದಾಯದಿಂದ ಗಮನಾರ್ಹ ಬೆಂಬಲ ಪಡೆದಿದ್ದಾರೆ. ರೈತರ ಪ್ರತಿಭಟನೆಯ ಬಳಿಕ ಅವರು ದೊಡ್ಡ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂತಹ ನಾಯಕನನ್ನು ಗೂಂಡಾ, ಗಲಭೆಕೋರ ಎಂದು ಕರೆಯುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.