ಗೊಂಡಾ (ಉತ್ತರ ಪ್ರದೇಶ): ಗೊಂಡಾ ಜಿಲ್ಲಾ ಘಟಕದ ಅದ್ಯಕ್ಷ ಅಮರ್ ಕಿಶೋರ್ ಕಶ್ಯಪ್ ಅವರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲೇ, ಅವರ ವಿರುದ್ಧ ಬಿಜೆಪಿ ಕ್ರಮ ಕೈಗೊಂಡಿದೆ.
ಕಶ್ಯಪ್ ಅವರನ್ನು ಇಂದು (ಬುಧವಾರ) ಪಕ್ಷದಿಂದ ಹೊರಹಾಕಲಾಗಿದೆ. ಈ ಸಂಬಂಧ, ಉತ್ತರ ಪ್ರದೇಶ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಅವರು ಕಶ್ಯಪ್‌ಗೆ ಪತ್ರ ಬರೆದಿದ್ದಾರೆ.
'ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ನೀಡಿರುವ ವಿವರಣೆಯು ಸಮಾಧಾನಕರವಾಗಿಲ್ಲ. ನಿಮ್ಮ ವರ್ತನೆಯು ಸಂಪೂರ್ಣ ಅಶಿಸ್ತಿನಿಂದ ಕೂಡಿದ್ದು, ರಾಜ್ಯ ಘಟಕದ ಅಧ್ಯಕ್ಷರ ಸೂಚನೆ ಮೇರೆಗೆ ನಿಮ್ಮನ್ನು ತಕ್ಷಣದಿಂದಲೇ ಪಕ್ಷದಿಂದ ಹೊರಹಾಕಲಾಗಿದೆ' ಎಂದು ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿರುವ ಸಿಸಿ ಕ್ಯಾಮರಾದಲ್ಲಿ 2025ರ ಮೇ 12ರಂದು ಸೆರೆಯಾಗಿದ್ದ ವಿಡಿಯೊ, ಅದೇ ತಿಂಗಳ ಅಂತ್ಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಮೇ 12ರ ರಾತ್ರಿ ಕಚೇರಿಗೆ ಬಂದಿದ್ದ ಕಶ್ಯಪ್ ಹಾಗೂ ಮಹಿಳೆ, ಕಚೇರಿಯ ಮೆಟ್ಟಿಲುಗಳ ಬಳಿಯೇ ಅಸಭ್ಯವಾಗಿ ವರ್ತಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಡಿಯೊದಲ್ಲಿರುವ ಮಹಿಳೆ ಬಿಜೆಪಿ ಕಾರ್ಯಕರ್ತೆ ಎನ್ನಲಾಗಿದೆ. ವಿಡಿಯೊ ಹರಿದಾಡುತ್ತಿದ್ದಂತೆ ಅವರು, ಛಪಿಯಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತ ವ್ಯಕ್ತಿಯ ವಿರುದ್ಧ ನೀಡಿರುವ ದೂರಿನಲ್ಲಿ, ರಾಜಕೀಯ ಪಿತೂರಿ ಭಾಗವಾಗಿ ತಿರುಚಿದ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಶ್ಯಪ್ ಅವರೊಂದಿಗಿನ ಸಂಬಂಧದ ಆರೋಪಗಳನ್ನು ಅಲ್ಲಗಳೆದಿರುವ ಮಹಿಳೆ, 'ಅವರು ನನ್ನ ಸಹೋದರ ಇದ್ದಂತೆ' ಎಂದು ಉಲ್ಲೇಖಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.