ADVERTISEMENT

ಯುವ ವೈದ್ಯರನ್ನು ಫುಟ್‌ಬಾಲ್‌ನಂತೆ ನಡೆಸಿಕೊಳ್ಳಬೇಡಿ: ಕೇಂದ್ರಕ್ಕೆ ಸುಪ್ರೀಂ ಚಾಟಿ

ಆಶಿಶ್ ತ್ರಿಪಾಠಿ
Published 27 ಸೆಪ್ಟೆಂಬರ್ 2021, 15:49 IST
Last Updated 27 ಸೆಪ್ಟೆಂಬರ್ 2021, 15:49 IST
ಸುಪ್ರೀಂ ಕೋರ್ಟ್: ಪಿಟಿಐ ಚಿತ್ರ
ಸುಪ್ರೀಂ ಕೋರ್ಟ್: ಪಿಟಿಐ ಚಿತ್ರ   

ನವದೆಹಲಿ: ‘ಸೂಪರ್‌ ಸ್ಪೆಷಾಲಿಟಿ’ ಕೋರ್ಸ್‌ಗಳ ಪ್ರವೇಶಕ್ಕಾಗಿ ನವೆಂಬರ್‌ನಲ್ಲಿ ನಡೆಯಲಿರುವ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ಯ (ನೀಟ್‌–ಎಸ್‌ಎಸ್‌) ಮಾದರಿಯನ್ನು ಕೊನೆಗಳಿಗೆಯಲ್ಲಿ ಬದಲಿಸಿರುವ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ‘ಆಡಳಿತ ನಡೆಸುವವರು ಯುವ ವೈದ್ಯರನ್ನು ಫುಟ್‌ಬಾಲ್‌ನಂತೆ ಪರಿಗಣಿಸಬಾರದು’ ಎಂದು ಸೂಚಿಸಿದೆ.

ಪ್ರತೀಕ್ ರಸ್ತೋಗಿ ಮತ್ತು 40 ಸ್ನಾತಕೋತ್ತರ ಪದವೀಧರ ವೈದ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಬಿ.ವಿ.ನಾಗರತ್ನ ಅವರ ಪೀಠವು, ‘ಸಭೆ ನಡೆಸಿ ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ. ನಿಮ್ಮ ಅಸೂಕ್ಷ್ಮ ಅಧಿಕಾರಿಗಳ ನಿರ್ಧಾರಗಳಿಂದಾಗಿ ಯುವ ವೈದ್ಯರನ್ನು ತೊಂದರೆಗೆ ಸಿಲುಕಿಸಲು ನಾವು ಬಿಡುವುದಿಲ್ಲ’ ಎಂದು ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್‌ಎಂಸಿ) ಮತ್ತು ಅದರ ಅಧಿಕಾರಿಗಳಿಗೆ ಹೇಳಿತು.

‘ವಿದ್ಯಾರ್ಥಿಗಳು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಲ್ಲಿ ಪ್ರವೇಶ ಪಡೆಯಲು ಕೆಲ ತಿಂಗಳು ಮುಂಚಿತವಾಗಿಯೇ ತಯಾರಿ ಆರಂಭಿಸಿರುತ್ತಾರೆ. ಪರೀಕ್ಷೆ ಸಮೀಪಿಸುತ್ತಿರುವಾಗ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ಮಾಡುವ ಅಗತ್ಯವೇನಿತ್ತು? ಈ ಬದಲಾವಣೆಗಳನ್ನು ಮುಂದಿನ ವರ್ಷದಿಂದ ಜಾರಿ ಮಾಡಬಹುದಲ್ಲ?’ ಎಂದು ನ್ಯಾಯಪೀಠ ಎನ್‌ಎಂಸಿಯನ್ನು ಪ್ರಶ್ನಿಸಿತು.

ADVERTISEMENT

‘ಅಧಿಕಾರದಲ್ಲಿ ಇರುವವರು ಹೇಗಾದರೂ ಅಧಿಕಾರ ಚಲಾಯಿಸಬಹುದು ಎಂದುಕೊಳ್ಳುವುದು ಸರಿಯಲ್ಲ’ ಎಂದು ಪೀಠವು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಪರ ಹಾಜರಿದ್ದ ಹಿರಿಯ ವಕೀಲ ಮಣಿಂದರ್‌ ಸಿಂಗ್‌ ಅವರಿಗೆ ಹೇಳಿತು.

ಬದಲಾವಣೆಗಳನ್ನು ಪರಿಚಯಿಸಿದ ಕುರಿತ ಕಾರಣಗಳು ತೃಪ್ತಿಕರವಾಗಿಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಕುರಿತು ಪೀಠ ಎಚ್ಚರಿಕೆ ನೀಡಿತು.

‌ಯುವ ವೈದ್ಯರ ಜತೆ ಪ್ರಜ್ಞಾಪೂರ್ವಕವಾಗಿ ವ್ಯವಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ನ್ಯಾಯಪೀಠ, ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ಮುಂದಿನ ವಾರ ವರದಿ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಅವರಿಗೆ ತಿಳಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಾಡಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಈ ವರ್ಷದ ನವೆಂಬರ್ 13 ಮತ್ತು 14 ರಂದು ನಡೆಯಲಿರುವ ಪರೀಕ್ಷೆಯ ಅಧಿಸೂಚನೆಯನ್ನು ಜುಲೈ 23ರಂದು ಹೊರಡಿಸಲಾಗಿತ್ತು. ಆದರೆ ಆಗಸ್ಟ್ 31ರಂದು ಮತ್ತೊಂದು ಅಧಿಸೂಚನೆ ಹೊರಬಿದ್ದಿತು. ಅದರಲ್ಲಿ ಪರೀಕ್ಷಾ ಮಾದರಿಯ ಬದಲಾವಣೆ ಬಗ್ಗೆ ಹೇಳಲಾಗಿತ್ತು. ಇದಕ್ಕೆ ಪೂರಕವಾಗಿ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಸಮಯದ ಕೊರತೆ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

2018ರಿಂದ 2020 ರವರೆಗೆ ಚಾಲ್ತಿಯಲ್ಲಿದ್ದ ಪರೀಕ್ಷಾ ಮಾದರಿಯ ಪ್ರಕಾರ, ಸೂಪರ್ ಸ್ಪೆಷಾಲಿಟಿಗೆ ಸಂಬಂಧಿಸಿದ ಶೇ 60 ಪ್ರಶ್ನೆಗಳು ಹಾಗೂ ‘ಫೀಡರ್‌’ ಕೋರ್ಸ್‌ಗಳಿಗೆ ಸಂಬಂಧಿಸಿದ ಶೇ 40ರಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಪರಿಷ್ಕೃತ ಪರೀಕ್ಷಾ ಮಾದರಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.